ಬೆಂಗಳೂರು: ಕರ್ನಾಟಕದಲ್ಲಿ ಖಾಸಗಿ ವಲಯದಲ್ಲಿ ಶೇ.100 ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎನ್ನುವ ಸರ್ಕಾರದ ನಿಯಮದ ವಿರುದ್ಧ ಈಗ ಪರಭಾಷಿಕರಿಂದ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ.
ಸಿದ್ದರಾಮಯ್ಯ ಸರ್ಕಾರದ ಈ ನಿರ್ಧರ ತಲೆ-ಬುಡವಿಲ್ಲದ ನಿರ್ಧಾರ. ಕರ್ನಾಟಕದ ಆರ್ಥಿಕತೆ ಬೆಳೆಸಲು ಕೇವಲ ಕನ್ನಡಿಗರು ಮಾತ್ರವಲ್ಲ, ಹೊರ ರಾಜ್ಯದವರ ಕೊಡುಗೆಯೂ ಇದೆ ಎಂದು ಪರಭಾಷಿಕರು ತಕರಾರು ತೆಗೆದಿದ್ದಾರೆ. ಶೇ.100 ರಷ್ಟು ಕನ್ನಡಿಗರಿಗೆ ಮೀಸಲಾತಿ ಎಂದರೆ ಇಲ್ಲಿಗೆ ಉದ್ಯೋಗ ಅರಸಿಕೊಂಡು ಬರುವ ಬೇರೆ ರಾಜ್ಯದವರು ಏನು ಮಾಡಬೇಕು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಉದ್ಯೋಗ ಎನ್ನುವುದು ಭಾಷೆಗೆ ಸಂಬಂಧಿಸಿದ್ದಲ್ಲ, ಕೌಶಲ್ಯತೆಗೆ ಸಂಬಂಧಿಸಿದ್ದು. ಹೊರ ರಾಜ್ಯದಲ್ಲಿ ನಿಪುಣರಿದ್ದರೆ ಅವರಿಗೆ ಅವರ ರಾಜ್ಯದಲ್ಲಿ ಅವಕಾಶವಿಲ್ಲದೇ ಇದ್ದಾಗ ಇಲ್ಲಿಗೆ ಬರುವುದು ಸಹಜವಲ್ಲವೇ? ಹಾಗಿದ್ದರೆ ನಾವೆಲ್ಲಾ ಒಂದು ದಿನ ಇದ್ದಕ್ಕಿದ್ದ ಹಾಗೆ ಹೊರಟು ಹೋದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸಿದ್ದಾರಾ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದ ರಾಜಧಾನಿ ಬೆಂಗಳೂರು ಐಟಿ ಸಿಟಿ ಎಂದು ಹೆಸರು ಮಾಡಿದೆ. ಇಲ್ಲಿ ಸಾವಿರಾರು ಮಂದಿ ಹೊರರಾಜ್ಯದವರು ಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲಾ ಈಗ ಆತಂಕವಾಗಲ್ವಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಕನ್ನಡಿಗರು ಇನ್ನು ಮುಂದೆ ಭಾರತದ ನೋಟುಗಳನ್ನೂ ತೆಗೆದುಕೊಳ್ಳಬಾರದು. ಯಾಕೆಂದರೆ ಅದರಲ್ಲಿ ಹಿಂದಿಯಲ್ಲಿ ಬರೆಯಲಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ. ಮತ್ತೆ ಕೆಲವರು ಇದೆಲ್ಲಾ ವಾಲ್ಮೀಕಿ ನಿಗಮ, ಮುಡಾ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಮಾಡಿದ ತಂತ್ರ ಎಂದು ಆರೋಪಿಸಿದ್ದಾರೆ.