ಪ್ರವೀಣ್ ಗೋಡ್ಖಿಂಡಿ "ಖ್ಯಾತ ಪಿಟೀಲು ವಾದಕ" ಅಂತೆ…!

ಬುಧವಾರ, 20 ಸೆಪ್ಟಂಬರ್ 2017 (08:34 IST)
ಮೈಸೂರು: ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಹೆಸರು ಮತ್ತು ಅವರು ನುಡಿಸುವ ವಾದ್ಯ ಎಲ್ಲರಿಗೂ ಚಿರಪರಿಚಿತ. ದೇಶವಲ್ಲದೆ ವಿದೇಶದಲ್ಲೂ ತಮ್ಮ ಕೊಳಲು ವಾದಕ್ಕೆ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಮಹಾನ್ ಕಲಾವಿದರು. ಆದರೆ ಈ ನಮ್ಮ ಕರ್ನಾಟಕ ಸರ್ಕಾರಕ್ಕೆ ಮಾತ್ರ ಪ್ರವೀಣ್ ಗೋಡ್ಖಿಂಡಿ ಯಾವ ವಾದ್ಯ ನುಡಿಸುತ್ತಾರೆ ಎಂದೇ ಇನ್ನೂ ತಿಳಿದಿಲ್ಲ.

ಪ್ರತಿವರ್ಷ ದಸರಾ ಸಮಯದಲ್ಲಿ ಒಂದಿಲ್ಲೊಂದು ಚರ್ಚೆಗೆ ಗ್ರಾಸವಾಗುವ ರಾಜ್ಯ ಸರ್ಕಾರ, ಸಂಗೀತ ಕಲಾವಿದರ ವಿಷಯದಲ್ಲಿ ದೊಡ್ಡ ಎಡವಟ್ಟು ಮಾಡಿದೆ. ಸೆಪ್ಟೆಂಬರ್ 21ರಿಂದ ಅಂದರೆ ನಾಳೆಯಿಂದ 8 ದಿನ ಅರಮನೆ ನಗರಿ ಮೈಸೂರಿನಲ್ಲಿ ವೈಭಯುತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ. 28ರಂದು ಸಂಜೆ 7.30ಕ್ಕೆ ಹಿಂದೂಸ್ತಾನಿ ಗಾಯನ ಮತ್ತು ಕೊಳಲುವಾದನ ಜುಗಲ್ ಬಂದಿ ನಡೆಯಲಿದೆ. ಇದರಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಜಯತೀರ್ಥ ಮೇವುಂಡಿ ಮತ್ತು ಪ್ರಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆದರೆ ಮೈಸೂರು ದಸರಾ ಸಾಂಸ್ಕೃತಿಕ ಉತ್ಸವ ಸಮಿತಿ ಆಮಂತ್ರಣ ಪತ್ರಿಕೆಯಲ್ಲಿ ಪ್ರವೀಣ್ ಗೋಡ್ಖಿಂಡಿ ಖ್ಯಾತ ಪಿಟೀಲು ವಾದಕರು ಎಂದು ತಪ್ಪಾಗಿ ಮುದ್ರಿಸಿ ಪೇಚಿಗೆ ಸಿಲುಕಿದೆ.

ವಾಟ್ಸಪ್ ಗ್ರೂಪ್ ವೊಂದರಲ್ಲಿ ಈ ಕುರಿತು ಚರ್ಚೆಯಾಗಿದ್ದು, `ನಾನು ಪಿಟೀಲು ನುಡಿಸುವುದು ನನಗೆ ಗೊತ್ತಿಲ್ಲವೇ’ ಎಂದು ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ ಯಾರು ಏನು ಬಾರಿಸ್ತಾರೆ ಎಂದೇ ಸರಿಯಾಗಿ ತಿಳಿಯದೆ ಅಪ್ರತಿಮ ಕಲಾವಿದರ ವಿಷಯದಲ್ಲಿ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಸಂಗೀತ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸರ್ಕಾರ ಈ ರೀತಿಯ ತಪ್ಪು ಮಾಡದೆ, ಕಲಾವಿದರನ್ನು ಗೌರವಿಸಲಿ ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ