ಬೆಂಗಳೂರು: ಕರ್ನಾಟಕದಲ್ಲಿಈ ವರ್ಷ ಚಳಿಗಾಲ ಇನ್ನೇನು ಮುಗಿಯುತ್ತಾ ಬಂದಿದ್ದು ಇನ್ನೇನು ಬೇಸಿಗೆಕಾಲ ಶುರುವಾಗಲಿದೆ. ಈ ವರ್ಷ ಬೇಸಿಗೆ ಕಾಲ ಹೇಗಿರಲಿದೆ, ನೀವು ಗಮನದಲ್ಲಿರಿಸಬೇಕಾದ ವಿಚಾರಗಳು ಯಾವುವು ಇಲ್ಲಿ ನೋಡಿ.
ಹವಾಮಾನ ವರದಿ ಪ್ರಕಾರ ಇದೀಗ ಕರ್ನಾಟಕದಲ್ಲಿ ಹಗಲು ಬೇಸಿಗೆಯ ವಾತಾವರಣ, ರಾತ್ರಿ ತಂಪು ವಾತಾವರಣವಿರುತ್ತದೆ. ಒಣ ಹವೆಯಿರುವುದರಿಂದ ಚರ್ಮ ಒಣಗಿದಂತಾಗಿ, ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನಂಶ ಅಗತ್ಯವೆನಿಸುತ್ತಿದೆ.
ಈ ನಡುವೆ ಈ ವರ್ಷ ಚಳಿಗಾಲವೂ ತೀವ್ರವಾಗಿತ್ತು. ಮಳೆಗಾಲವೂ ಸುದೀರ್ಘವಾಗಿತ್ತು. ಹೀಗಾಗಿ ಬೇಸಿಗೆಯೂ ಅಷ್ಟೇ ತೀವ್ರವಾಗಿರಲಿದೆ ಎನ್ನುತ್ತಿದೆ ಹವಾಮಾನ ವರದಿಗಳು. ಮಾರ್ಚ್ ನಿಂದ ನಿಜವಾದ ಬೇಸಿಗೆ ಕಾಲ ಆರಂಭವಾಗಲಿದೆ. ಈ ಬಾರಿ ಹಗಲು ಸೂರ್ಯನ ತಾಪ ವಿಪರೀತ ಎನಿಸುವ ಮಟ್ಟಕ್ಕೆ ತಲುಪುವ ಸಾಧ್ಯತೆಯಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಣ ಹವೆ ಮತ್ತು ತೀವ್ರ ಬಿಸಿಲಿನಿಂದ ಕೂಡಿದ ಬೇಸಿಗೆಕಾಲವಿರಲಿದೆ.
ಈ ಬಾರಿಯೂ ಎಂದಿನಂತೆ ಬೇಸಿಗೆಕಾಲದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಯಾಗುವ ಸೂಚನೆಯಿದೆ. ಚರ್ಮ ಸಂಬಂಧೀ ಖಾಯಿಲೆಗಳು, ಡಿಹೈಡ್ರೇಷನ್ ನಿಂದ ಬರಬಹುದಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾದೀತು. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮತ್ತು ದೇಹವನ್ನು ಶುಚಿಯಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ. ಮೇ ತಿಂಗಳ ಕೊನೆಯವರೆಗೂ ಬೇಸಿಗೆ ಮುಂದುವರಿಯುವ ನಿರೀಕ್ಷೆಯಿದೆ. ಕೊನೆಯ ವಾರದಲ್ಲಿ ಮಳೆಯಾಗುವ ಸಾಧ್ಯತೆಯಿದೆ.