ಐದು ಗುಂಟೆ ಜಮೀನಿಗೆ ಸರ್ವೆ ನಕ್ಷೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಲೈಸೆನ್ಸ್ ಸರ್ವೆಯರ್

ಶುಕ್ರವಾರ, 1 ಅಕ್ಟೋಬರ್ 2021 (21:35 IST)
ಐದು ಗುಂಟೆ ಜಮೀನಿಗೆ ಸರ್ವೆ ನಕ್ಷೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಲೈಸೆನ್ಸ್  ಸರ್ವೆಯರ್ ಅನ್ನು ರೆಡ್‍ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ. 
ಬೆಂಗಳೂರು ದಕ್ಷಿಣ ತಾಲ್ಲೂಕು ಸಹಾಯಕ ನಿರ್ದೇಶಕರ ಕಚೇರಿಯ ಲೈಸೆನ್ಸ್ ಸರ್ವೆಯರ್ ಜಿ. ಬಸವರಾಜು ಬಂಧಿತ ಆರೋಪಿ. ಭ್ರಷ್ಟಾಚಾರ ತಡಡೆ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು. 
ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ಗುಳಕಮಲೆಯ ನಿವಾಸಿಯೊಬ್ಬರು ಗುಳಕಮಲೆ ಗ್ರಾಮದ ಸರ್ವೆ ನಂ.119/15ರಲ್ಲಿ  5 ಗುಂಟೆ ಜಮೀನನ್ನು ಖರೀದಿಸಲು ಕರಾರು ಪತ್ರ ಮಾಡಿಕೊಂಡಿದ್ದರು. ಕ್ರಯ ಪತ್ರಕ್ಕೆ ಸ್ಕೆಚ್ ಬೇಕಾಗಿದ್ದರಿಂದ ಉತ್ತರಹಳ್ಳಿ ನಾಡ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಬೆಂಗಳೂರು ದಕ್ಷಿಣ ತಾಲ್ಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಲೈಸೆನ್ಸ್  ಸರ್ವೆಯರ್‍ಜಿ. ಬಸವರಾಜು, 5 ಗುಂಟೆಗೆ ಸ್ಕೆಚ್ ಮಾಡಿಕೊಡಲು 45 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಚೌಕಾಸಿ ಮಾಡಿ 22 ಸಾವಿರ ರೂ.ಗೆ ಒಪ್ಪಿ ಮುಂಗಡವಾಗಿ 10 ಸಾವಿರ ರೂ. ಪಡೆದುಕೊಂಡಿದ್ದರು. ಉಳಿಕೆ 12 ಸಾವಿರ ರೂ. ಕೊಡುವಂತೆ ಬೇಡಿಕೆ ಒಡ್ಡಿದ್ದರು.
ಈ ಬಗ್ಗೆ ಅರ್ಜಿದಾರ ಕೊಟ್ಟ ದೂರಿನ ಮೇರೆಗೆ ರಾಮನಗರ ಜಿಲ್ಲಾ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು, ಗುರುವಾರ ಬೆಂಗಳೂರು ದಕ್ಷಿಣ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ 12 ಸಾವಿರ ರೂ. ಪಡೆಯುತ್ತಿದ್ದಾಗ ಬಸವರಾಜುನನ್ನು ಬಂಧಿಸಿರುವುದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ