ಪಂಜಾಬ್ ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಧಾನಿ ಮೋದಿ ಅವರ ಸರ್ಕಾರಿ ಕಾರ್ಯಕ್ರಮಕ್ಕೆ ತೆರಳದಂತೆ, ಭದ್ರತೆಯ ನಿಯಮಗಳನ್ನು ಗಾಳಿಗೆ ತೂರಿ ದೇಶದ ಪ್ರಧಾನಿಯ ಭದ್ರತೆಗೆ ಕಾಂಗ್ರೆಸ್ ಸವಾಲೊಡ್ಡಿದೆ. ಇದು ಕಾಂಗ್ರೆಸ್ ನ ಸರ್ವಾಧಿಕಾರಿ ಮಾನಸಿಕತೆಯನ್ನು ತೋರ್ಪಡಿಸುತ್ತದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಆರೋಪಿಸಿದ್ದಾರೆ.
ಸರ್ಕಾರಿ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ಪಂಜಾಬ್‌ನ ಕಾಂಗ್ರೆಸ್ ಸರ್ಕಾರ ಅಡ್ಡಿಪಡಿಸಿ ದಾರಿಯಲ್ಲಿ ನಿಲ್ಲುವಂತೆ ಮಾಡಿದೆ ಎಂದು ಆರೋಪಿಸಿರುವ ಕೊಡಗು ಯುವ ಸೇನೆ, ಪಂಜಾಬ್ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯವೆಂದು ತಿಳಿಸಿದೆ.
ಯುವ ಸೇನೆಯ ಪ್ರಮುಖರಾದ ಕುಲದೀಪ್ ಪೂಣಚ್ಚ, ಮಾಚೆಟ್ಟಿರ ಸಚಿನ್ ಮಂದಣ್ಣ, ವೇಣು ಪೊನ್ನೇಟಿ, ಕೊರಕುಟ್ಟಿರ ಲತಾ ಬೋಪಯ್ಯ ಹಾಗೂ ಹರಪಹಳ್ಳಿ ಅಶ್ವಥ್ ಗೌಡ ಅವರು ಪಂಜಾಬ್ ಸರಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ಅವರನ್ನೇ ಈ ರೀತಿ ನಡೆಸಿಕೊಳ್ಳುವ ಕಾಂಗ್ರೆಸ್, ಮುಂದೆ ಅಧಿಕಾರಕ್ಕೆ ಬಂದರೆ ಸಾಮಾನ್ಯ ಜನರಿಗೆ ಯಾವ ರೀತಿಯ ಭದ್ರತೆ ನೀಡಲಾಗುವುದು ಎಂದು ತಿಳಿದುಕೊಳ್ಳಬೇಕಾಗಿದೆ. ಭಾರತದ ಪ್ರಜ್ಞಾವಂತ ಜನರು ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮುಂದೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.