ಯಲಹಂಕ ವಲಯ*ಯಲಹಂಕ ವಲಯ ವ್ಯಾಪ್ತಿಯಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಸಭೆ
ಭಾನುವಾರ, 2 ಏಪ್ರಿಲ್ 2023 (16:34 IST)
ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಯಾ ವ್ಯಾಪ್ತಿಯಲ್ಲಿ ಬರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ನಿಮ್ಮ-ನಿಮ್ಮ ಅರ್ಪಾಟ್ಮೆಂಟ್ ಗಳಲ್ಲಿ ಮತದಾನ ಮಾಡುವ ಎಲ್ಲರಿಗೂ ಮತದಾನದ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ನೀಡಿ ತಪ್ಪದೆ ಮತದಾನ ಮಾಡುವಂತೆ ಮಾಡಿ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
ಯಲಹಂಕ ವಲಯದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ(RWAs) ಪದಾಧಿಕಾರಿಗಳೊಂದಿಗೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಾಣಾ ಆಯೋಗದಿಂದ ಮಾಡಿರುವಂತಹ ಸೌಲಭ್ಯಗಳ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡುವ ಮೂಲಕ ಈ ಬಾರಿ ನಗರದಲ್ಲಿ ಹೆಚ್ಚು ಮತದಾನವಾಗಲು ಕೈಜೋಡಿಸಲು ತಿಳಿಸಿದರು.ನಗರದಲ್ಲಿ 95,13,830 ಲಕ್ಷ ಮತದಾರರಿದ್ದು, 8,615 ಮತಗಟ್ಟೆಗಳು ಬರಲಿವೆ. ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮತಗಟ್ಟೆಯ ಸಂಖ್ಯೆ ಹಾಕಿದರೆ ಸಾಕು ಎಷ್ಟು ಮಂದಿ ಸರತಿ ಸಾಲಿನಲ್ಲಿದ್ದಾರೆ ಎಂಬ ಮಾಹಿತಿ ಲಬ್ಯವಾಗಲಿದೆ. ಜೊತೆಗೆ ಮತಗಟ್ಟೆಯ ಬಳಿಯ ಪಾರ್ಕಿಂಗ್ ನಲ್ಲಿ ಎಷ್ಟು ವಾಹನಗಳು ಇವೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಲಿವೆ ಎಂದು ಹೇಳಿದರು.
ಬೂತ್ ಮಟ್ಟದ ಅಧಿಕಾರಿಗಳ ಭಾವಚಿತ್ರವುಳ್ಳ ಸಂಪೂರ್ಣ ವಿವರದ ಮಾಹಿತಿಯಲ್ಲಿ ಪಾಲಿಕೆಯ ವೆಬ್ ಸೈಟ್ ನಲ್ಲಿ ಹಾಕಲಾಗಿದೆ. ಅವರಿಗೆ ಕರೆಮಾಡಿ ಅಗತ್ಯ ಮಾಹಿತಿ ಪಡೆಯಬಹುದು. ಜೊತೆಗೆ ಮತಗಟ್ಟೆಗಳ ಬಳಿ ತೆರಳಿ ಮಾಹಿತಿ ಪಡೆದುಕೊಳ್ಳಬಹುದು ಎಂದರು.ಬಿಬಿಎಂಪಿ ವ್ಯಾಪ್ತಿಯ ಆಯಾ ವಾರ್ಡ್ ವ್ಯಾಪ್ತಿಯಲ್ಲಿರುವವರು ಕೂಡಲೆ ವಿ.ಹೆಚ್.ಎ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ನಿಮ್ಮ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಿದರೆ ಸಾಕು ನಿಮ್ಮ ಸಂಪೂರ್ಣ ವಿವರದ ಜೊತೆಗೆ ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.
ಮತಗಟ್ಟೆಗಳ ಬಳಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಮಾಡಲಾಗುತ್ತಿದೆ. ಅದರಂತೆ ಶೌಚಾಲಯ, ಕುಡಿಯುವ ನೀರು, ಚೇರ್ ಗಳು, ಪ್ಯಾನ್, ವಿದ್ಯುತ್ ವ್ಯವಸ್ಥೆ, ವಿಕಲಚೇತನರಿಗಾಗಿ ರ‍್ಯಾಂಪ್ ವ್ಯವಸ್ಥೆ ಸೇರಿದಂತೆ ಇನ್ನಿತರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮತಗಟ್ಟೆಗಳ ಬಳಿ ಮತದಾರರಿಗೆ ಬಿಸಿಲು ಬೀಳದಂತೆ ಪೆಂಡಾಲ್ ವ್ಯವಸ್ಥೆ, ಸರತಿ ಸಾಲು ಕೂಡಾ ವ್ಯವಸ್ಥಿತವಾಗಿ ಇರುವಂತೆ ಮಾಡಲು ಕೂಡಾ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
ಚುನಾವಣಾ ಪ್ರಚಾರದ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳನ್ನು ವರದಿ ಮಾಡುವ ಸಲುವಾಗಿ ಸಿ-ವಿಜಿಲ್(cVIGIL) ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ನಿಯಮ ಉಲ್ಲಂಘಿಸುವುದು ಕಂಡುಬಂದ ಕೂಡಲೆ ಫೋಟೊ ಅಥವಾ ವೀಡಿಯೋವನ್ನು ಅಪ್ಲೋಡ್ ಮಾಡಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಈ ವೇಳೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷಾದ ಸಂಗಪ್ಪ, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ್, ಜಂಟಿ ಆಯುಕ್ತರಾದ ಪಲ್ಲವಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ಯ ಸಂಬAಧ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮತದಾನ ಮಾಡುವ ವಿಚಾರದಲ್ಲಿ ತಾತ್ಸಾರ ಮನೋಭಾವ ಇರುವವರಿಗೆ ಮತದಾನದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿ ಮತ ಚಲಾಯಿಸುವಂತೆ ಮಾಡಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
ಪೂರ್ವ ವಲಯದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ(RWAs) ಪದಾಧಿಕಾರಿಗಳೊಂದಿಗೆ ಇಂದು ನಡೆದ ಸಂವಾದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾನ ಗುರುತಿನ ಚೀಟಿಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಕಳುಹಿಸಿಕೊಡಲಾಗುವುದು. ಸ್ಪೀಡ್ ಪೋಸ್ಟ್ ಮೂಲಕ ಕಳುಹಿದ ಮತದಾನ ಚೀಟಿಗಳು ಹಿಂತಿರುಗಿ ಬಂದಂತಹ ಚೀಟಿಗಳನ್ನು ಮಾತ್ರ ಬೂತ್ ಮಟ್ಟದ ಅಧಿಕಾರಿಳು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು.
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ-ತಮ್ಮ ವ್ಯಾಪ್ತಿಯಲ್ಲಿ ಸಭೆಗಳನ್ನು ಏರ್ಪಡಿಸಿಕೊಂಡು ಮತದಾನ ಮಾಡುವ ಬಗ್ಗೆ ಹೆಚ್ಚು-ಹೆಚ್ಚು ಅರಿವು ಮೂಡಿಸುವ ಕೆಲಸ ಮಾಡಬೇಕು. ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಎಲ್ಲರೂ ರಾಯಭಾರಿಗಳೇ ಎಂದು ತಿಳಿಸಿದರು.ಈ ವೇಳೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷಾದ ಸಂಗಪ್ಪ, ವಲಯ ಆಯುಕ್ತರಾದ ಪಿ.ಎನ್.ರವೀಂದ್ರ, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ್, ಜಂಟಿ ಆಯುಕ್ತರಾದ ಪಲ್ಲವಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.