ಪತ್ತೆಯಾಗದ ಎಲ್ಲಾ ಪ್ರಕರಣಗಳು ಇಂಪಾರ್ಟೆಂಟ್: ಡಿಜಿಪಿ ನೀಲಮಣಿ ರಾಜು
ಮಂಗಳವಾರ, 31 ಅಕ್ಟೋಬರ್ 2017 (19:01 IST)
ಬೆಂಗಳೂರು: ರಾಜ್ಯದ ನೂತನ ಹಾಗೂ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿಯಾಗಿ ನೀಲಮಣಿ ಎನ್.ರಾಜು ಅಧಿಕಾರ ಸ್ವೀಕರಿಸಿದ್ದಾರೆ.
ನೃಪತುಂಗ ರಸ್ತೆಯಲ್ಲಿರುವ ಡಿಜಿ, ಐಜಿಪಿ ಕಚೇರಿಯಲ್ಲಿ ಆರ್.ಕೆ.ದತ್ತಾ ಬ್ಯಾಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ನಂತರ ಹಾಲಿ ಡಿಜಿ, ಐಜಿಪಿ ನೀಲಮಣಿ ರಾಜು ಮತ್ತು ಆರ್.ಕೆ.ದತ್ತಾ ಜಂಟಿ ಸುದ್ದಿಗೊಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಗಮಿತ ಡಿಜಿ ಆರ್.ಕೆ.ದತ್ತಾ, ಹೊಸ ಡಿಜಿ ಐಜಿಪಿ ಗೆ ಶುಭಾಷಯ ಕೋರಿದರು. ಇಂದು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಇತಿಹಾಸ ನಿರ್ಮಾಣವಾಗಿದೆ. ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಡಿಜಿ, ಐಜಿಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ ಎಂದರು.
ನನ್ನ ಒಂಭತ್ತು ತಿಂಗಳ ಅಧಿಕಾರಾವಧಿ ನನಗೆ ತೃಪ್ತಿ ತಂದಿದೆ. ನನಗೆ ಸಹಕಾರ ನೀಡಿದ ಎಲ್ಲಾ ಅಧಿಕಾರಿಗಳು ಧನ್ಯವಾದ. ನನಗೆ ಸಹಕಾರ ನೀಡಿದ ಹಾಗೆ ನೀಲಮಣಿ ರಾಜು ಅವರಿಗೂ ಸಹಕಾರ ನೀಡ್ತೀರಿ ಎನ್ನುವ ನಂಬಿಕೆಯಿದೆ. ನೀಲಮಣಿ ಅವರಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಸೇವೆ ಸಲ್ಲಿಸಿದ ಅನುಭವ ಇದೆ ಎಂದರು.
ನಂತರ ಡಿಜಿಪಿ ನೀಲಮಣಿ ರಾಜು ಮಾತನಾಡಿ, ನಿರ್ಗಮಿತ ಡಿಜಿ, ಐಜಿಪಿ ದತ್ತಾ ಮತ್ತು ಹಿರಿಯ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು. ಸಿಎಂ, ಗೃಹ ಸಚಿವರಿಗೆ ಧನ್ಯವಾದ ಅರ್ಪಿಸಿದರು. ದತ್ತಾ ಇಲಾಖೆಯಲ್ಲಿ ತಂದ ಹೊಸ ಬೀಟ್ ಸಿಸ್ಟಮ್ ಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆ ಮತ್ತು ಅಧಿಕಾರಿಗಳ ಒಳಿತಿಗಾಗಿ ದತ್ತಾ ತೆಗೆದುಕೊಂಡ ನಿರ್ಧಾರಗಳನ್ನ ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದರು.
ನಾನು ದಿನದ 24 ಗಂಟೆ ಕೆಲಸ ಮಾಡೋಕೆ ಸಿದ್ಧವಾಗಿದ್ದೇನೆ. ನಿಮ್ಮೆಲ್ಲರ ಸಹಕಾರ ಅಗತ್ಯ. ಕಡಿಮೆ ವರ್ಷ ಕರ್ನಾಟಕದಲ್ಲಿ ಕೆಲಸ ಮಾಡಿದ್ರು ಕರ್ನಾಟಕ ಗೊತ್ತಿಲ್ಲ ಎಂದು ಹೇಳಲ್ಲ. ಆರಂಭದಲ್ಲಿ ಹತ್ತು ವರ್ಷ ಕೆಲಸ ಮಾಡಿದ್ದೆ. ಹೀಗಾಗಿ ನಂಗೆ ಕೆಲಸ ಮಾಡುವುದು ಕಷ್ಟ ಆಗಲ್ಲ. ಅಪರಾಧ ತಡೆ, ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾರ್ವಜನಿಕರ ಸುರಕ್ಷೆ ಎಲ್ಲದಕ್ಕೂ ಒತ್ತು ಕೊಡ್ತೀನಿ. ಆದರೆ ಪ್ರಮುಖ ಆಧ್ಯತೆ ಕಾನೂನು ಸುವ್ಯವಸ್ಥೆ ಕಡೆಗೆ ಇರುತ್ತೆ. ಹೀಗಾಗಿ ನಂಗೆ ಕೆಲಸ ಮಾಡೋದೇನೂ ಕಷ್ಟವಾಗಲ್ಲ ಎಂದರು.
ACB ಕೇಸ್ ಗಳನ್ನ ಅವರೇ ನಿಭಾಯಿಸುತ್ತಾರೆ. ಪತ್ತೆಯಾಗದ ಎಲ್ಲಾ ಪ್ರಕರಣಗಳು ಇಂಪಾರ್ಟೆಂಟ್. ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿದ್ದಾರೆ. ಪ್ರಾಸಿಕ್ಯೂಷನ್ ವಿಷಯದಲ್ಲಿ, ಕೆಲವು ಬಾರಿ ತನಿಖೆಯಲ್ಲಿ ವಿಳಂಬ ಆಗಿರಬಹುದು. ಅಧಿಕಾರಿಗಳ ಜತೆ ಚರ್ಚಿಸಿ ಈ ಬಗ್ಗೆ ಬೇಕಾದ ಮುನ್ನೆಚ್ಚರಿಕೆ ತೆಗೆದುಕೊಳ್ತೀವಿ. ಟಿಪ್ಪು ಜಯಂತಿ ತುಂಬಾ ಗಂಭೀರ ವಿಚಾರ. ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಬಹಳ ಸೂಕ್ಷ್ಮವಾಗಿ ಬಗೆಹರಿಸಬೇಕು. ಪೊಲೀಸ್ ಠಾಣೆಗೆ ಬರಲು ಮಹಿಳೆಯರು ಹೆದರದಂತಹ, ಮಹಿಳಾ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕು ಎಂದರು.