ಬರಪೀಡಿತ ತಾಲೂಕು: ನಿಖರ ಬೆಳೆ ಹಾನಿ ಮಾಹಿತಿ ಸಲ್ಲಿಕೆಗೆ ಸೂಚನೆ
ಕಲಬುರಗಿ ಜಿಲ್ಲೆಯ ಬರಪೀಡಿತ ತಾಲೂಕುಗಳಲ್ಲಿ ಬೆಳೆಹಾನಿಯ ಜಂಟಿ ಸಮೀಕ್ಷೆ ಕೈಗೊಂಡು ವಾಸ್ತವಿಕ ಮತ್ತು ವಿಸ್ವಾಸಾರ್ಹವಾದ ನಿಖರ ಮಾಹಿತಿ ಸಂಗ್ರಹಿಸುವಂತೆ ಕಲಬುರಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಬೆಳೆ ಹಾನಿಯ ಜಂಟಿ ಸಮೀಕ್ಷೆಯ ಕುರಿತ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಜಂಟಿ ಸಮೀಕ್ಷೆಗೆ ನೇಮಿಸಲಾಗಿದೆ. ಕೇಂದ್ರ ಸರ್ಕಾರ ಬರ ನಿರ್ವಹಣೆ ಕೈಪಿಡಿಯಲ್ಲಿ ಸೂಚಿಸಿರುವ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಿ ಸೆಪ್ಟೆಂಬರ್ 25 ರೊಳಗಾಗಿ ಸಲ್ಲಿಸಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತಲಾದ 65 ಸಾವಿರ ಹೆಕ್ಟೇರ್ ಉದ್ದು ಹಾಗೂ 4.5 ಲಕ್ಷ ಹೆಕ್ಟೇರ್ ಪ್ರದೇಶದ ತೊಗರಿ ಬೆಳೆಯು ಮಳೆಯ ಅಭಾವದಿಂದ ಹಾನಿಗೊಳಗಾಗಿದೆ. ಈಗಾಗಲೇ ಉದ್ದು ಕಟಾವು ಪ್ರಾರಂಭವಾಗಿದ್ದು, ಜಂಟಿ ಸಮೀಕ್ಷಾ ತಂಡವು ಪ್ರತಿ ತಾಲೂಕಿನ 10 ಪ್ರತಿಶತ ಹಳ್ಳಿಗಳನ್ನು ಮಾದರಿಯನ್ನಾಗಿಟ್ಟುಕೊಂಡು ಒಂದು ಗ್ರಾಮದಿಂದ ಒಂದು ಎಕರೆಗೆ ಕಡಿಮೆಯಿಲ್ಲದ 5 ಹೊಲಗಳ ನೆಲದ ಸತ್ಯತೆ (ಗ್ರೌಂಡ್ ಟ್ರುಥಿಂಗ್) ಬಗ್ಗೆ ಛಾಯಾಚಿತ್ರ ತೆಗೆದು ವೆಬ್‍ಸೈಟ್‍ನಲ್ಲಿ ದಾಖಲಿಸಬೇಕು. ಇದರ ಆಧಾರದ ಮೇಲೆ ಕೇಂದ್ರ ಸರ್ಕಾರವು ಪರಿಹಾರಧನ ನಿಗದಿ ಮಾಡಲಿದೆ. ಈ ಗ್ರೌಂಡ್ ಟ್ರುಥಿಂಗ್ ಸಮೀಕ್ಷೆಯನ್ನು ಹಾನಿಗೊಳಗಾದ ಬೆಳೆಯ ನಿಜ ಪರಿಸ್ಥಿತಿ ತಿಳಿಸಲು ನಿಖರವಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.