ಮೈಸೂರಿಗೆ ಬೀಗರೂಟಕ್ಕೆ ಬರಕ್ಕಾಗುತ್ತೆ, ಸಿಗಂದೂರಿಗೆ ಬರಕ್ಕಾಗಲ್ವಾ: ಸಿಎಂಗೆ ಪ್ರತಾಪ್ ಸಿಂಹ ಗುದ್ದು

Krishnaveni K

ಗುರುವಾರ, 17 ಜುಲೈ 2025 (12:01 IST)
Photo Credit: X
ಬೆಂಗಳೂರು: ಶಿವಮೊಗ್ಗದ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮಕ್ಕೆ ಸರಿಯಾಗಿ ಆಹ್ವಾನವಿತ್ತಿಲ್ಲ ಎಂದು ಕಿಡಿ ಕಾರಿದ್ದ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಕೊನೆಯ ಕ್ಷಣದಲ್ಲಿ ಆಹ್ವಾನ ನೀಡಲಾಗಿತ್ತು ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದರು. ಪ್ರತಿಭಟನೆ ಸಲುವಾಗಿ ಕಾಂಗ್ರೆಸ್ ನ ಯಾವ ಶಾಸಕ, ಸಚಿವರೂ ಹೋಗಿರಲಿಲ್ಲ.

ಇದರ ಬಗ್ಗೆ ಇಂದು ಪ್ರತಾಪ್ ಸಿಂಹ ಮಾಧ್ಯಮಗಳ ಮುಂದೆ ಹರಿಹಾಯ್ದಿದ್ದಾರೆ. ‘ಪ್ರತಿನಿತ್ಯ ನನಗೆ ಆಹ್ವಾನಿಸಿಲ್ಲ ಎಂದು ಬೊಬ್ಬೆ ಹೊಡೆಯುತ್ತೀರಲ್ಲಾ? ಇಂಡಿಯಲ್ಲಿ ನಡೆದಿದ್ದು ನಿಮ್ಮದೇ ಕಾರ್ಯಕ್ರಮ. ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ಹೆಲಿಕಾಪ್ಟರ್ ನಲ್ಲಿ ಹೋಗುತ್ತೀರಿ. ಅದೇ ರೀತಿ ಇಂಡಿಗೆ ಹೋಗುವಾಗ ದಾರಿ ಮಧ್ಯದಲ್ಲಿ ಒಮ್ಮೆ ಸಿಗಂದೂರಿಗೆ ಬಂದು ಹೋಗಬಹುದಿತ್ತಲ್ವಾ? ಸಿಗಂದೂರಿಗೆ ಸೇತುವೆಯಾಗಬೇಕೆಂಬುದು ಅಲ್ಲಿನ ಜನರ 60 ವರ್ಷದ ಕನಸು. ಆ ಜನರ ಸಂಭ್ರಮ ನೋಡಿಯಾದರೂ ನೀವು ಹೋಗಬೇಕಿತ್ತು. ಮೈಸೂರಿಗೆ ಬೀಗರೂಟಕ್ಕೆ ಬರಕ್ಕಾಗುತ್ತೆ, ಸಿಗಂದೂರಿಗೆ ಹೋಗಕ್ಕಾಗಲ್ವಾ?’ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಪ್ರಧಾನಿ ಮೋದಿಯವರೆಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಪ್ರತಾಪ್ ಸಿಂಹ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ನೀವು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಿಂಗ್ ರೋಡ್ ಗೆ ಅನುದಾನ ಕೇಂದ್ರದಿಂದ ಕೊಡಿಸಿದ್ದು ನಾವು. ಆದರೆ ಸಂಸತ್ ನಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಇಲ್ಲಿ ಉದ್ಘಾಟನೆ ಇಟ್ಟುಕೊಂಡ್ರಿ. ಆಗ ನಾನು ಅಸಮಾಧಾನ ಹೊರಹಾಕಲು ಹೊರಟರೆ ಶ್ರೀನಿವಾಸ್ ಪ್ರಸಾದ್ ಅವರು ತಡೆದರು. ನೀವು ಈಗ ಯಾವ ಶಿಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ