ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಇತ್ತ ಅಂಬಾವಿಲಾಸ ಅರಮನೆಯಲ್ಲಿ ವೈಭವೋಪೇತ ಖಾಸಗಿ ದರ್ಬಾರ್‌ನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರಂಭಿಸಿದರು.
ನವರಾತ್ರಿ ಸಂಭ್ರಮ ಇಂದಿನಿಂದ ಆರಂಭವಾಗಿದ್ದು, ಅರಮನೆಯಲ್ಲಿ ಖಾಸಗಿ ದರ್ಬಾರ್ ಶುರುವಾಗಿದೆ. ಅದರಂತೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮಾಡಿ, ಅರಮನೆಗೆ ಬರುವ ಕ್ಷೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳಸ್ನಾನ ಮಾಡಿಸಲಾಯಿತು. ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಹೆಂಗಸರು ಆರತಿ ಬೆಳಗಿದರು. ನಂತರ ಯದುವೀರ್ ಒಡೆಯರ್ ಪೂಜೆಗೆ ಸಿದ್ಧರಾದರು.
ಮೊದಲಿಗೆ ಚಾಮುಂಡಿತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ ನಂತರ ಕಳಶಪೂಜೆ, ಕಂಕಣಪೂಜೆ ನಡೆಸಿದರು. ಮುಂಜಾನೆ 7.55ರಿಂದ 8.15ಕ್ಕೆ ಸಿಂಹಾಸನ ಸಿದ್ದತಾ ಕಾರ್ಯ ಪೂರ್ಣಗೊಂಡಿತು. ಬಳಿಕ 8.20 ರಿಂದ 9.10ಕ್ಕೆ ತಮ್ಮ ಕುಲದೇವತೆ ಚಾಮುಂಡಿ ಸನ್ನಿಧಿಯಲ್ಲಿ ಕಂಕಣ ಧರಿಸಿದರು. ಆ ನಂತರ ದುರ್ಗಾ ಸ್ವರೂಪಗಳಾದ ಬ್ರಹ್ಮಾಣಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಮಹೇಶ್ವರಿ, ದುರ್ಗಾ, ಕಾಳಿ, ಚಂಡಿಕೆ ಹೀಗೆ ಶಕ್ತಿದೇವತೆಗಳನ್ನೂ ಆರಾಧಿಸಿದರು. ಶಿವಸನ್ನಿಧಿ, ಕೃಷ್ಣಸನ್ನಿಧಿ, ಚಾಮುಂಡಿ ಸನ್ನಿಧಿ ಮುಂತಾದ ಸನ್ನಿಧಿಗಳಲ್ಲಿ ಪೂಜೆ ಸಲ್ಲಿಸಿದರು. ನಂತರ ದೇವಿ ಭಾಗವತ ಮತ್ತು ರಾಮಾಯಣ ಪಾರಾಯಣ ನಡೆಯಿತು. ಬಳಿಕ ಗಣಪತಿ ಪೂಜೆ, ಅಷ್ಟಧಿಕ್ಪಾಲಕರ ಪೂಜೆ, ನವಗ್ರಹ ಪೂಜೆ, ಬ್ರಹ್ಮ, ವಿಷ್ಣು, ಮಹೇಶ್ವರ, ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಪೂಜೆ ನೆರವೇರಿಸಿದರು.
ಪೂಜಾ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಸ್ವರ್ಣ ವರ್ಣದ ರಾಜ ಪೋಷಾಕು ಧರಿಸಿ, ಮುತ್ತಿನಿಂದ ಮಾಡಿದ ನೀಲಿ ಬಣ್ಣದ ಪೇಟ, ರಾಜಲಾಂಛನವಾದ ಗಂಢಭೇರುಂಡ ಚಿನ್ನದ ಸರ ಧರಿಸಿ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ಪ್ರವೇಶಿಸಿದರು. ಬಳಿಕ 32 ಕಳಶ ಪೂಜೆ ನೆರವೇರಿಸಿ, ಸಿಂಹಾಸನ ಪೂಜೆ ಮಾಡಿ, ರಾಜಗಾಂಭೀರ್ಯದಿಂದ ರತ್ನಖಚಿತ ಸಿಂಹಾಸನವೇರಿ ದರ್ಬಾರ್ ಆರಂಭಿಸಿದರು.
ಈ ಸಂದರ್ಭದಲ್ಲಿ ಅರಮನೆಯ ಆವರಣದಲ್ಲಿರುವ ಎಲ್ಲ ದೇವಾಲಯಗಳು, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ, ನಗರದಲ್ಲಿರುವ ಕೆಲ ಪ್ರಮುಖ ದೇವಾಲಯಗಳು, ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ, ಶೃಂಗೇರಿಯ ಶಾರದಾಪೀಠ, ಮೇಲುಕೋಟೆಯ ಚೆಲುವನಾರಾಯಣ ಸೇರಿದಂತೆ ತಮಿಳುನಾಡಿನ ಕೆಲವು ದೇವಾಲಯಗಳಿಂದ ಬಂದಿದ್ದ ತೀರ್ಥಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮೈಸೂರು, ರಾಜ್ಯ, ದೇಶದ ಬಗ್ಗೆ ಉಭಯ ಕುಶಲೋಪರಿ ಮಾಹಿತಿ ಪಡೆದರು.
ಈ ವೇಳೆ ಕರ್ನಾಟಕ ಪೊಲೀಸ್ ಬ್ಯಾಂಡ್ ಸಿಬ್ಬಂದಿ ಮೈಸೂರು ಸಂಸ್ಥಾನದ `ಕಾಯೋ ಶ್ರೀ ಗೌರಿ’ ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಿದರು. ಬಳಿಕ ರಾಜರಿಗೆ ಬಹುಪರಾಕ್ ಕೂಗಲಾಯಿತು. ರಾಣಿ, ಪತ್ನಿ ತ್ರಿಷಿಕಾ ದೇವಿಯವರಿಗೆ ದೇವರ ಪ್ರಸಾದ ನೀಡಿದರು. ದರ್ಬಾರ್ ಮುಗಿದ ನಂತರ ತ್ರಿಷಿಕಾ ಒಡೆಯರ್ ಅವರು ಯದುವೀರ್ ಒಡೆಯರ್ ಅವರಿಗೆ ಆರತಿ ಬೆಳಗಿದರು. ವಿಜಯದಶಮಿವರೆಗೂ ಯದುವೀರ್ ಒಡೆಯರ್ ಅವರು ರಾಜ ವೈಭೋಗದ ಖಾಸಗಿ ದರ್ಬಾರ್ ನಡೆಯಲಿದ್ದಾರೆ.