ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಜಲಕ್ಷಾಮ, ಬರಗಾಲದ ಕುರಿತಂತೆ ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರ ಬರುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರ ಬರುತ್ತದೆ. ಇದಕ್ಕೆಲ್ಲಾ ಕಾಂಗ್ರೆಸ್ ಸರ್ಕಾರದ ಬೇಜವಾಬ್ಧಾರಿತನವೇ ಕಾರಣ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಆದೇಶ ಬರುವ ಮೊದಲೇ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದಲಿಂದಲೇ ಬೆಂಗಳೂರಿನಲ್ಲಿ ಈ ಬಾರಿ ಜಲಕ್ಷಾಮ ಎದುರಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬೇಸಿಗೆ ಆರಂಭಕ್ಕೂ ಮೊದಲೇ ಈ ಬಾರಿ ಬೆಂಗಳೂರಿನಲ್ಲಿ ಜಲಕ್ಷಾಮ ಎದುರಾಗಿದೆ. ಈಗಾಗಲೇ ನೀರು ಪೋಲು ಮಾಡುವವರಿಗೆ 5000 ರೂ. ದಂಡ ಮತ್ತು ಟ್ಯಾಂಕರ್ ಮಾಲಿಕರಿಗೆ ದರ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇದನ್ನು ಟೀಕಿಸಿರುವ ಅಶೋಕ್ ಇದುವರೆಗೆ ಟ್ಯಾಂಕರ್ ನೀರಿಗೆ ದರ ನಿಗದಿ ಮಾಡಿದ್ದು ಬಿಟ್ಟರೆ ರಾಜ್ಯ ಸರ್ಕಾರ ಏನೂ ಮಾಡಿಲ್ಲ ಎಂದು ದೂರಿದ್ದಾರೆ.
ಯುಗಾದಿ ಬಳಿಕ ಮಳೆಯಾಗದೇ ಇದ್ದರೆ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇನ್ನಷ್ಟು ತೀವ್ರವಾಗಲಿದೆ. ಇನ್ನು, ರಾಜ್ಯ ಸರ್ಕಾರ ನೀರಿನ ಅಭಾವ ಪರಿಹರಿಸಲು ತಕ್ಕ ಕ್ರಮ ಕೈಗೊಳ್ಳದೇ ಇದ್ದರೆ ಸೋಮವಾರದಿಂದ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ.