ರಾಯಚೂರು: ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಎಸ್ಕೇಪ್ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಈ ವೇಳೆ ರೋಗಿಗಳ ಪರಿಚಾರಕರು ಮತ್ತು ಆಸ್ಪತ್ರೆಗೆ ಬಂದಿದ್ದ ಸಂದರ್ಶಕರು ಅದನ್ನು ವಿಫಲಗೊಳಿಸಿದ ಘಟನೆ ವರದಿಯಾಗಿದೆ.
ಬುಧವಾರ ಮುಂಜಾನೆ ರೋಗಿಗಳ ಪರಿಚಾರಕರು ನಿದ್ರೆಗೆ ಜಾರಿದ ಸಂದರ್ಭದಲ್ಲಿ ರಾಯಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮಹಿಳೆಯರ ವೇಷದಲ್ಲಿ ಆಗಮಿಸಿದ ಗುಂಪೊಂದು ನಾಲ್ಕನೇ ಮಹಡಿಯಲ್ಲಿರುವ ಹೆರಿಗೆ ವಾರ್ಡ್ ನುಗ್ಗಿದೆ.
ಅವರಲ್ಲಿ ಓರ್ವ ನವ ಜಾತ ಶಿಶುವನ್ನು ಅಪಹರಿಸಲು ಯತ್ನಿಸಿದ್ದಾನೆ ಆದರೆ ಸ್ಥಳದಲ್ಲಿದ್ದ ಪರಿಚಾರಕರೊಬ್ಬರು ಅನುಮಾನಗೊಂಡು ಮಧ್ಯ ಪ್ರವೇಶಿಸಿದ್ದಾರೆ. ಈ ವೇಳೆ ಮಹಿಳೆಯ ವೇಷದಲ್ಲಿದ್ದ ವ್ಯಕ್ತಿಯ ಜೊತೆಗೆ ಕೆಲಹೊತ್ತು ವಾಗ್ವಾದ ನಡೆಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಪಹರಣ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳು ಭಾಗಿಯಾಗಿದ್ದಾರೆ. ಆದರೆ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವೇಳೆ ಗೃಹರಕ್ಷಕ ಸಿಬ್ಬಂದಿ ಕರ್ತವ್ಯದಲ್ಲಿ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ನಂತರ ಸಾರ್ವಜನಿಕರು ಬಂಧಿತ ಆರೋಪಿಯನ್ನು ಮಾರ್ಕೆಟ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.