ಪ್ರತೀ ಬಾರಿಯೂ ಇಲ್ಲಿ ಗಣೇಶನ ಕೂರಿಸುವುದಕ್ಕೆ ಹಿಂದೂ ಸಂಘಟನೆಗಳು ಜಟಾಪಟಿಯನ್ನೇ ನಡೆಸಬೇಕಾಗುತ್ತದೆ. ಈ ಬಾರಿ ಮಹಾನಗರ ಪಾಲಿಕೆ ಗಣೇಶನ ಕೂರಿಸಲು ಒಪ್ಪಿಗೆಯೇನೋ ನೀಡಿದೆ. ಆದರೆ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು, ಅವುಗಳನ್ನು ಪಾಲಿಸಿದರೆ ಮಾತ್ರ ಅವಕಾಶ ಎಂದಿದೆ.
ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 9 ರವರೆಗೆ ಮಾತ್ರ ಗಣೇಶನ ಕೂರಿಸಲು ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 9 ರ ಮಧ್ಯಾಹ್ನ 12 ಗಂಟೆಯೊಳಗೆ ಮೂರ್ತಿ ವಿಸರ್ಜನೆ ಮಾಡಿರಬೇಕು. ಮೂರ್ತಿ ಪ್ರತಿಷ್ಠಾಪನೆಗೆ ಮುನ್ನ ಕಡ್ಡಾಯವಾಗಿ ಪಾಲಿಕೆ ಮತ್ತು ಪೊಲೀಸರ ಅನುಮತಿ ಪಡೆದಿರಬೇಕು. ಸೆ. 7ರಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯೊಳಗಾಗಿ ಮೂರ್ತಿ ಪ್ರತಿಷ್ಠಾಪಿಸಿ ಸೆ.9 ರ ಮಧ್ಯಾಹ್ನ 12 ಗಂಟೆಯೊಳಗೆ ವಿಸರ್ಜನೆ ಮಾಡಬೇಕು.
ಇನ್ನು ಗಣೇಶನ ಮೂರ್ತಿ 30 ಅಡಿ ಉದ್ದ 30 ಅಡಿ ಅಗಲ ಮೀರಬಾರದು. ಪೊಲೀಸ್, ಪಾಲಿಕೆ ಅಥವಾ ಕಂದಾಯ ಇಲಾಖೆ ಸೂಚಿಸುವ ಜಾಗದಲ್ಲೇ ಪ್ರತಿಷ್ಠಾಪನೆ ಮಾಡಬೇಕು. ಅನುಮತಿ ಇರುವಷ್ಟು ಜಾಗದಲ್ಲಿ ಮಾತ್ರ ಪೆಂಡಾಲ್ ಹಾಕಬೇಕು. ಉತ್ಸವ ಮೂರ್ತಿಯ ಹೊರತು ಯಾವುದೇ ಭಾವುಟ, ಪ್ರಚೋದನಕಾರಿ ಫೋಟೋ, ಭಿತ್ತಿಪತ್ರ, ಬ್ಯಾನರ್ ಗಳಿಗೆ ಅವಕಾಶವಿಲ್ಲ. ಯಾವುದೇ ಪ್ರಚೋದನಕಾರೀ ಹಾಡು, ಡಿಜೆ ಸೌಂಡ್, ಧ್ವನಿ ವರ್ಧಕಗಳನ್ನುಬಳಸುವಂತಿಲ್ಲ.