ಬೆಂಗಳೂರು: ತವರು ಜಿಲ್ಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಡದ ಸಿದ್ದರಾಮಯ್ಯಗೆ ಸಿಎಂ ಪಟ್ಟ, ತಮ್ಮನನ್ನೂ ಗೆಲ್ಲಿಸಿಕೊಡದ ಶಿವಕುಮಾರ್‌ಗೆ ಡಿಸಿಎಂ ಪಟ್ಟ, ಆದರೆ ಕಲ್ಯಾಣ ಕರ್ನಾಟಕ ಗೆಲ್ಲಿಸಿದ ಖರ್ಗೆ ಅವರಿಗೆ ನೆಹರೂ ಕುಟುಂಬದ ಜತೆ ಒಂದು ಫೋಟೋ ಅಷ್ಟೇ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ ಮಾಡಿದರು.
ಲೋಕಸಭಾ ಚುನಾವಣೆಯ ಫಲಿತಾಂಶ ಕಳೆದ ದಿನ ಬಹಿರಂಗವಾಗಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕದಲ್ಲಿ ಕಮಾಲ್ ಮಾಡಿ, ಎಲ್ಲ ಐದು ಲೋಕಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ವಶಮಾಡಿಕೊಂಡಿದ್ದಾರೆ. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆನೆ ಬಲ ಬಂದಿದೆ. ಕಲಬುರಗಿ ಸೇರದಂತೆ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ಬೀದರ್ ಲೋಕಸಭಾ ಕ್ಷೇತ್ರಗಳಲ್ಲಿ ಭಾರಿ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದರೂ ಮತದಾರರು ಕಾಂಗ್ರೆಸ್ ಕಡೆ ಒಲವು ತೋರಿಸಿ, ಗೆಲುವಿನ ದಡ ಸೇರಿಸಿದ್ದಾರೆ.
ಅದಲ್ಲದೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಸ್ಟ್ ಪಾಸ್ ಆಗಿದ್ದ ಬೆನ್ನಲ್ಲೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಸಭೆ ನಡೆಸಿ ನಗುವಿನ ನಗೆ ಬೀರಿರುವ ಫೋಟೋ ಹಂಚಿಕೊಂಡಿದ್ದರು.
ಇದೇ ಫೋಟೋ ಹಂಚಿಕೊಂಡು ಎಕ್ಸ್‌ನಲ್ಲಿ ಬರೆದುಕೊಂಡಿರುವ ಆರ್ ಅಶೋಕ್ ಅವರು, ತಮ್ಮ ತವರೂರು ಮೈಸೂರಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಯನ್ನು ಗೆಲ್ಲಿಸಿಕೊಳ್ಳಲಾಗದ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪಟ್ಟ, ಇನ್ನೂ ತಮ್ಮ ಸ್ವಂತ ತಮ್ಮನನ್ನು ಗೆಲ್ಲಿಸಿಕೊಡಲಾಗದ ಡಿಕೆ ಶಿವಕುಮಾರ್ ಅವರಿಗೆ ಡಿಸಿಎಂ ಪಟ್ಟ, ಆದರೆ ಕಲ್ಯಾಣ ಕರ್ನಾಟಕ ಗೆಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗಾಂಧಿ ಕುಟುಂಬದ ಜತೆ ಒಂದು ಫೋಟೋ. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ದಲಿತ ನಾಯಕರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಲೇವಾಡಿ ಮಾಡಿದರು.