ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಕೇರಳದಲ್ಲಿ ನಡೆದಿದೆ ಎನ್ನಲಾದ ಪ್ರಾಣಿ ಬಲಿ ಆರೋಪವನ್ನು ಕೇರಳದ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವೆ ಆರ್. ಬಿಂದು ನಿರಾಕರಿಸಿದ್ದಾರೆ.
ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಮ್ಮ ವಿರುದ್ಧ ಉತ್ತರ ಕೇರಳದ ದೇವಸ್ಥಾನದಲ್ಲಿ ಪ್ರಾಣಿ ಬಲಿ ನೀಡುವ 'ಶತ್ರು ಭೈರವಿ ಯಾಗ' ಕೈಗೊಳ್ಳಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಗುರುವಾರ ಆರೋಪಿಸಿದ್ದರು. ಅದರ ಬೆನ್ನಲ್ಲೇ ಕೇರಳದ ಸಚಿವೆ ಪ್ರತಿಕ್ರಿಯೆ ನೀಡಿದ್ದಾರೆ.
ಇಂತಹ ಕೃತ್ಯಗಳು ಕೇರಳದಲ್ಲಿ ನಡೆಯುವುದಿಲ್ಲ. ದೇಶದ ಇತರೆ ಭಾಗಗಳಲ್ಲಿ ಸಮಾಜವನ್ನು ಕರಾಳ ಯುಗಕ್ಕೆ ಎಳೆಯುವ ಪ್ರಯತ್ನಗಳು ನಡೆಯುತ್ತಿವೆ. ಹಾಗಿದ್ದರೂ, ಅಂಥ ಪ್ರಯತ್ನಗಳು ಕೇರಳದಲ್ಲಿ ನಡೆದಿವೆಯೇ ಎಂಬುದರ ಕುರಿತು ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.
ಯಾರ ಹೆಸರನ್ನು ಬಹಿರಂಗಪಡಿಸದೇ ರಾಜ್ಯದ ಕೆಲವು ರಾಜಕೀಯ ವ್ಯಕ್ತಿಗಳು ಈ ಕೃತ್ಯ ನಡೆಸಿದ್ದರು ಎಂದಿದ್ದರು. ಅಘೋರಿಗಳ ಮೂಲಕ ಈ ಯಾಗ ನಡೆಸಲಾಗಿದೆ ಎಂದೂ ಶಿವಕುಮಾರ್ ಆರೋಪ ಮಾಡಿದ್ದರು.
ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಬಳಿ ಶತ್ರು ಸಂಹಾರಕ್ಕಾಗಿ 'ಶತ್ರು ಭೈರವಿ ಯಾಗ' ನಡೀತಿದೆ. ಈ ಯಾಗಕ್ಕೆ 'ಪಂಚ ಬಲಿ' ನೀಡಲಾಗುತ್ತದೆ. 21 ಮೇಕೆ, ಮೂರು ಎಮ್ಮೆ, 21 ಕಪ್ಪು ಕುರಿ, ಐದು ಹಂದಿಗಳ ಬಲಿ ಕೊಡಲಾಗುತ್ತದೆ. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದ್ದರು.