ಕಾಂಗ್ರೆಸ್ ನಲ್ಲಿ ಎಡಗೈ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಈ ಸಮುದಾಯದ ಆರ್.ಬಿ.ತಿಮ್ಮಾಪೂರ ಅವರಿಗೆ ಸಕ್ಕರೆ ಖಾತೆಯ ಜೊತೆಗೆ ಒಳನಾಡು ಸಾರಿಗೆ ಮತ್ತು ಬಂದರು ಖಾತೆಯಂತಹ ಉತ್ತಮ ಖಾತೆಯನ್ನು ನೀಡಬೇಕಂತೆ.
ಹೀಗಂತ ಒತ್ತಾಯಿಸಿ ಕಾಂಗ್ರೆಸ್ ಮಾದಿಗ ಮುಖಂಡರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿದ್ದಾರೆ.
ರಾಜ್ಯದ ಪರಿಶಿಷ್ಟ ಜಾತಿ ಮತ್ತು ವರ್ಗಗಳಲ್ಲಿ ಎಡಗೈ ಮಾದಿಗ ಸಮುದಾಯದ ಜನಸಂಖ್ಯೆಯೇ ಹೆಚ್ಚಿದ್ದರೂ ಪಕ್ಷದಲ್ಲಿ ಈ ಸಮುದಾಯಕ್ಕೆ ಅನ್ಯಾಯಮಾಡಲಾಗುತ್ತಿದೆ. ಸರ್ಕಾರದಲ್ಲಿ ಆರ್.ಬಿ.ತಿಮ್ಮಾಪೂರ ಸೇರಿಸಿ ಒಟ್ಟು ಇಬ್ಬರು ಶಾಸಕರಿದ್ದು, ತಿಮ್ಮಾಪೂರ ಅವರಿಗೆ ಸಕ್ಕರೆ ಸಚಿವ ಸ್ಥಾನ ಮಾತ್ರ ನೀಡಲಾಗಿದೆ. ಒಳನಾಡು ಸಾರಿಗೆ ಮತ್ತು ಬಂದರು ಖಾತೆಯನ್ನು ತಿಮ್ಮಾಪೂರ ಅವರಿಗೆ ನೀಡಬೇಕೆಂದು ಎಐಸಿಸಿ ಶಿಫಾರಸು ಮಾಡಿ ಬಹಳ ದಿನಗಳೇ ಕಳೆದಿವೆ. ಹೀಗಿದ್ದಾಗ್ಯೂ ಅವರಿಗೆ ಉತ್ತಮ ಖಾತೆ ನೀಡಿಲ್ಲದ್ದನ್ನು ನೋಡಿದರೆ ಜಾತಿತಾರತಮ್ಯವಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸಹೋದರ ಜಾತಿಯವರಾದ ಡಾ.ಜಿ.ಪರಮೇಶ್ವರ್ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಜೊತೆಗೆ ಉಪಮುಖ್ಯಮಂತ್ರಿ ಹುದ್ದೆಯನ್ನೂ ಪ್ರಿಯಾಂಕ್ ಖರ್ಗೆ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಹುದ್ದೆಯನ್ನು ನೀಡಲಾಗಿದೆ. ಆದ್ದರಿಂದ ಡಾ.ಜಿ.ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಆರ್.ಬಿ.ತಿಮ್ಮಾಪೂರ ಅವರಿಗೆ ಉತ್ತಮಖಾತೆ ಕೊಡಿಸಲು ಶಿಫಾರಸು ಮಾಡಬೇಕು ಎಂದು ಒತ್ತಾಯಿಸಲಾಗಿದೆ.