ಚಿಕ್ಕಬಳ್ಳಾಪುರ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಗೆದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಪ್ರದೀಪ್ ಈಶ್ವರ್ ಗೆ ಈಗ ತಮ್ಮ ಹೇಳಿಕೆಯೇ ಸಂಕಷ್ಟ ತಂದೊಡ್ಡಿದೆ.
ಪ್ರದೀಪ್ ಈಶ್ವರ್ ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸುಧಾಕರ್ ರನ್ನು ಸೋಲಿಸಿದ್ದರು. ಇಬ್ಬರ ನಡುವೆ ರಾಜಕೀಯ ವೈರುಧ್ಯಗಳಿದ್ದೇ ಇದೆ. ಇದೇ ಕಾರಣಕ್ಕೆ ಚಿಕ್ಕಬಳ್ಳಾಪುರದಲ್ಲಿ ಈ ಬಾರಿ ಸುಧಾಕರ್ ಒಂದೇ ಒಂದು ವೋಟ್ ನಿಂದ ಗೆದ್ದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ, ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ಪ್ರದೀಪ್ ಶಪಥ ಮಾಡಿದ್ದರು.
ನಿನ್ನೆ ಸುಧಾಕರ್ ಗೆಲ್ಲುತ್ತಿದ್ದಂತೇ ಪ್ರದೀಪ್ ಹಳೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಟ್ರೋಲ್ ಆಗಿದ್ದವು. ಇದೆಲ್ಲಾ ಬೆಳವಣಿಗೆ ನಡುವೆ ನಿನ್ನೆ ರಾತ್ರಿ ಪ್ರದೀಪ್ ನಿವಾಸಕ್ಕೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ರಾತ್ರಿ ಸುಮಾರು 10.15 ರ ಹೊತ್ತಿಗೆ ಈ ಘಟನೆ ನಡೆದಿದೆ. ನಾಲ್ಕೈದು ಹುಡುಗರ ತಂಡ ಪ್ರದೀಪ್ ಮನೆಗೆ ಕಲ್ಲೆಸೆದಿದ್ದಾರೆ. ಇದರಿಂದ ಕಿಟಿಕಿ ಗಾಜುಗಳಿಗೆ ಹಾನಿಯಾಗಿದೆ. ಕಲ್ಲು ಎಸೆಯುತ್ತಿದ್ದಾಗ ಸಿಸಿಟಿವಿ ಸೆನ್ಸರ್ ಆನ್ ಆಗಿದ್ದು ಕಿಡಿಗೇಡಿಗಳು ಓಡಿ ಹೋಗಿದ್ದಾರೆ ಎಂದು ಪ್ರದೀಪ್ ಮನೆಯ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. ಪೊಲೀಸರು ಈಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.