ಪ್ರಜ್ವಲ್ ಅಣ್ಣನೂ ಅಷ್ಟೇ, ಸೂರಜ್ ಅಣ್ಣನೂ ಅಷ್ಟೇ ಹಾಸನ ಜಿಲ್ಲೆ ಋಣ ತೀರಿಸ್ತೀವಿ

Krishnaveni K

ಗುರುವಾರ, 2 ಜನವರಿ 2025 (16:26 IST)
ಹಾಸನ:  ಪ್ರಜ್ವಲ್ ಅಣ್ಣ ಆಗ್ಲೀ, ಸೂರಜ್ ಅಣ್ಣ ಆಗ್ಲೀ ಹಾಸನ ಜಿಲ್ಲೆಯ ಋಣ ತೀರಿಸಿಯೇ ತೀರಿಸುತ್ತೇವೆ ಎಂದು ಸೂರಜ್ ರೇವಣ್ಣ ಕಾರ್ಯಕ್ರಮವೊಂದರಲ್ಲಿ ವೀರಾವೇಷದ ಭಾಷಣ ಮಾಡಿದ್ದಾರೆ.

ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಮೇಲೆ ಆರೋಪ ಪಟ್ಟಿ ಕೂಡಾ ಸಲ್ಲಿಕೆಯಾಗಿದ್ದು ಇದುವರೆಗೆ ಅವರಿಗೆ ಜಾಮೀನು ಸಿಕ್ಕಿಲ್ಲ.

ಇನ್ನು ಸೂರಜ್ ರೇವಣ್ಣ ಮೇಲೆಯೂ ತಮ್ಮ ಪುರುಷ ಸಹಾಯಕನಿಗೇ ಅಸಹಜ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಇದೆ. ಅವರೂ ಕೂಡಾ ಬಂಧಿತರಾಗಿ ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಈ ನಡುವೆ ಚನ್ನರಾಯಪಟ್ಟಣದಲ್ಲಿ ತಮ್ಮ ಹುಟ್ಟುಹಬ್ಬ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಸೂರಜ್ ರೇವಣ್ಣ ಆಕ್ರೋಶದಿಂದ ಮಾತನಾಡಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸೂರಜ್, ಸೂರ್ಯ ಹುಟ್ಟೋದಷ್ಟೇ ಅಲ್ಲ, ಪ್ರಜ್ವಲಿಸುತ್ತಾನೆ ಎನ್ನುವುದು ನೆನಪಿರಲಿ. ನಿಮ್ಮ ಪ್ರಜ್ವಲ್ ಅಣ್ಣನೂ ಅಷ್ಟೇ ಸೂರಜ್ ಅಣ್ಣನೂ ಅಷ್ಟೇ ಈ ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡಿಯೇ ತೀರುತ್ತೇವೆ ಎಂದು ಶಪಥ ಮಾಡಿದ್ದಾರೆ.

ಕೆಲವು ಅಧಿಕಾರಿಗಳು ನಮ್ಮ ಕಾರ್ಯಕರ್ತರಿಗೆ ಯಾವ ರೀತಿ ಕಿರುಕುಳ ನೀಡುತ್ತಿದ್ದಾರೆ ಎಂದು ಗಮನಿಸುತ್ತಿದ್ದೇವೆ. ಯಾವ ಸರ್ಕಾರವೂ ಶಾಶ್ವತವಲ್ಲ. ನಾನು, ನನ್ನಿಂದ ಎನ್ನುವವರು ಒಮ್ಮೆ ಸ್ಮಶಾನಕ್ಕೆ ಹೋಗಿ ನೋಡಲಿ. ಎಂಥೆಂತಹವರು ಏನಾಗಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ