ಪಠ್ಯಪುಸ್ತಕ ಮಾಹಿತಿ ಇಲ್ಲದೆ ಇಕ್ಕಟ್ಟಿಗೆ ಸಿಲುಕಿದ ಶಿಕ್ಷಣ ಇಲಾಖೆ
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಪಠ್ಯ ಪುಸ್ತಕಗಳು ಸರಬರಾಜಾಗುತ್ತಿದ್ದು, ಈಗಾಗಲೇ ಪಠ್ಯಪುಸ್ತಕ ತಲುಪಿರುವ ಶಾಲೆಗಳಿಗೆ ಪ್ರಸಕ್ತ ಸಾಲಿಗೆ ಪರಿಷ್ಕರಣೆಯಾಗಿರುವ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಗಳು ಬಂದಿಲ್ಲ. ಬದಲಿಗೆ ಕಳೆದ ಸಾಲಿನ ಪಠ್ಯಗಳನ್ನೊಳಗೊಂಡ ಪಠ್ಯಗಳೇ ಸರಬರಾಜಾಗಿವೆ. ಇದರಿಂದ ಶಿಕ್ಷಕರು ಈಗ ಬಂದಿರುವ ಹಳೆಯ ಪಠ್ಯಕ್ರಮವನ್ನೇ ಬೋಧಿಸಬೇಕಾ, ಇಲ್ಲ ಹೊಸ ಪಠ್ಯಕ್ಕೆ ಕಾಯಬೇಕಾ? ಯಾವ್ಯಾವ ಪಠ್ಯ ಪರಿಷ್ಕರಣೆಯಾಗಿದೆ, ಅದನ್ನು ಬಿಟ್ಟು ಉಳಿದದ್ದು ಬೋಧಿಸಬೇಕಾ ಎಂಬುದು ತಿಳಿಯದೆ ಗೊಂದಲಕ್ಕೀಡಾಗಿದ್ದಾರೆ. ಇತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಕೂಡ ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಲಾಗದ ಸ್ಥಿತಿ ತಲುಪಿದ್ದಾರೆ. ಹಳೆಯ ಪಠ್ಯಕ್ರಮವನ್ನೇ ಬೋಧಿಸಲು ಹೇಳುವುದಾ? ಹೊಸ ಪಠ್ಯ ಬಂದ ಬಳಿಕ ಹಳೆ ಪಠ್ಯ ವಾಪಸ್ ಪಡೆಯಲಾಗುತ್ತಾ? ಇಲ್ಲಾ ಹಳೆಯ ಪಠ್ಯದ ಜೊತೆಗೆ ಪರಿಷ್ಕರಣೆಯಾಗಿರುವ ಪಾಠಗಳ ಪ್ರತಿಗಳು ಮಾತ್ರ ಪ್ರತ್ಯೇಕವಾಗಿ ಬರುತ್ತವಾ ಇಲ್ಲಮಾಹಿತಿಯೂ ಇಲ್ಲದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.