ಯಕ್ಷಗಾನ ಸಂಭಾಷಣೆಯಲ್ಲಿ ಪ್ರಧಾನಿಯ ಹೆಸರು ಉಲ್ಲೇಖ; ಆಕ್ರೋಶಗೊಂಡ ಕಾಂಗ್ರೆಸಿಗರು ಮಾಡಿದ್ದೇನು?
ಗುರುವಾರ, 31 ಜನವರಿ 2019 (07:42 IST)
ಮಂಗಳೂರು : ಯಕ್ಷಗಾನದ ಸಂಭಾಷಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹೆಸರು ಉಲ್ಲೇಖಿಸಿದ್ದಕ್ಕೆ ಕಲಾವಿದರನ್ನು ಠಾಣೆಗೆ ಕರೆಸಿಕೊಂಡು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ಪುತ್ತೂರು ತಾಲೂಕಿನ ದೇಂತಡ್ಕದಲ್ಲಿಛತ್ರಪತಿ ಶಿವಾಜಿ ಮಹಾರಾಜನ ಕಥೆಯುಳ್ಳ ಪ್ರಸಂಗದ ಯಕ್ಷಗಾನ ನಡೆಯುತ್ತಿದ್ದಾಗ ಶಿವಾಜಿಯ ಗುರು ಸಮರ್ಥ ರಾಮದಾಸನ ಪಾತ್ರ ಮಾಡಿದ್ದ ಕಲಾವಿದ, ‘ಭಾರತದ ಸ್ವಚ್ಛತೆಗಾಗಿ ನರೇಂದ್ರನಂತೆ ನೀನು ಕೇಸರಿಯ ತಂಡ ಕಟ್ಟಬೇಕು. ರಾತ್ರಿ ವೇಳೆ ಗೋವುಗಳನ್ನು ಕದ್ದೊಯ್ಯುವ ದುಷ್ಟರನ್ನು ಸದೆಬಡಿಯಲು ಜಾಗರಣ ನಿಲ್ಲುವಂತೆ ತರುಣ ಪಡೆಯನ್ನು ಜಾಗರಣ ವೇದಿಕೆಯ ರೂಪದಲ್ಲಿ ಕಟ್ಟಬೇಕಿದೆ’ ಎನ್ನುವ ಉಪದೇಶವನ್ನು ಶಿವಾಜಿಗೆ ಹೇಳುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಕಾಂಗ್ರೆಸ್ಸಿಗರು ಸಿಟ್ಟಾಗಿದ್ದು, ಮಾಜಿ ಸಚಿವ ರಮಾನಾಥ ರೈ ದಕ್ಷಿಣ ಕನ್ನಡ ಎಸ್.ಪಿಗೆ ಫೋನ್ ಮಾಡಿ ಕಲಾವಿದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಪುತ್ತೂರು ಠಾಣೆ ಪೊಲೀಸರು ಕಲಾವಿದನನ್ನು ಠಾಣೆಗೆ ಕರೆಸಿ, ಮುಚ್ಚಳಿಕೆ ಬರೆಸಿಕೊಂಡಿದ್ದು, ಈ ಬಗ್ಗೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.