ಆಶ್ರಯ ಕೊಟ್ಟ ಅಣ್ಣನ ಮನೆಯಲ್ಲೇ ಕಳ್ಳತನ
ಪ್ರೀತಿಸಿದವಳ ಆಸೆ ಪೂರೈಸುವ ಸಲುವಾಗಿ, ಆಶ್ರಯ ನೀಡಿ ಸಾಕುತ್ತಿದ್ದ ಅಣ್ಣನ ಮನೆಯಲ್ಲಿಯೇ ಕಳ್ಳತನ ಮಾಡಿದ್ದ ಆರೋಪಿಯನ್ನು ಆಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಇರ್ಫಾನ್ ಬಂಧಿತ ಆರೋಪಿ.. ಆಡುಗೋಡಿಯ ಮಹಾಲಿಂಗೇಶ್ವರ ಬಂಡೆ ಏರಿಯಾದಲ್ಲಿ ಅಣ್ಣ ಸಲ್ಮಾನ್, ಅತ್ತಿಗೆ ಹಾಗೂ ತಾಯಿಯೊಂದಿಗೆ ವಾಸವಿದ್ದ ಆರೋಪಿ ನಿರುದ್ಯೋಗಿಯಾಗಿದ್ದ. ಸಹೋದರ ಸಲ್ಮಾನ್ ಸುದ್ದುಗುಂಟೆಪಾಳ್ಯದಲ್ಲಿ ಸೇಲ್ಸ್ಮ್ಯಾನ್ ಕೆಲಸ ಮಾಡಿಕೊಂಡಿದ್ದ. ಇನ್ನು ತಮ್ಮ ಇರ್ಫಾನ್ ಮಾತ್ರ ಕೆಲಸವಿಲ್ಲದೇ ಓಡಾಡಿಕೊಂಡಿದ್ದ. ಕೆಲಸವಿಲ್ಲದಿದ್ದರೂ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆರೋಪಿ, ಆಕೆಯನ್ನು ಗೋವಾಗೆ ಪ್ರವಾಸ ಹೋಗುವ ಬಯಕೆಯನ್ನು ಪೂರ್ಣಗೊಳಿಸಲು ಮನೆಯಲ್ಲಿ ಬೀರುವಿನಲ್ಲಿದ್ದ 103 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ನವೆಂಬರ್ 29ರಂದು ಸಲ್ಮಾನ್ ಮನೆಯ ಬೀರು ಪರಿಶೀಲಿಸಿದಾಗ ಕಳ್ಳತನ ಬಯಲಾಗಿತ್ತು.. ಅದೇ ಸಂದರ್ಭದಲ್ಲಿ 4-5 ದಿನಗಳಿಂದ ಮನೆಗೆ ಬಾರದೇ ಇದ್ದ ತಮ್ಮ ಇರ್ಫಾನ್ ವಿರುದ್ಧ ಅನುಮಾನ ವ್ಯಕ್ತಪಡಿಸಿ ಆಡುಗೋಡಿ ಠಾಣೆಗೆ ಸಲ್ಮಾನ್ ದೂರು ನೀಡಿದ್ದರು. ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಗೋವಾಗೆ ಹೋಗಿ ಮೋಜು ಮಸ್ತಿಯಲ್ಲಿ ತೊಡಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.. ಬಂಧಿತನಿಂದ ಐದು ಲಕ್ಷ ಮೌಲ್ಯದ 103 ಗ್ರಾಂ ಚಿನ್ನಾಭರಣ ಹಾಗೂ ಒಂದು DSLR ಕ್ಯಾಮರಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.