ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಉದಾಹರಿಸಿದ ಈ 8 ಪಾಸಿಟಿವ್ ಸಂಗತಿಗಳು

ಬುಧವಾರ, 29 ಡಿಸೆಂಬರ್ 2021 (17:57 IST)
“ಕಳೆದ ಏಳು ವರ್ಷಗಳಲ್ಲಿ ಮನ್ ಕೀ ಬಾತ್ ಅನ್ನು ಸರ್ಕಾರದ ಸಾಧನೆ ಹೇಳುವ ವೇದಿಕೆಯಾಗಿ ಬಳಸಿಕೊಂಡಿದ್ದಿಲ್ಲ. ಏಕೆಂದರೆ ಇದು ಜನರ ಸಾಧನಾಗಾಥೆಗಳನ್ನು ಬಿಂಬಿಸುವ, ಸಮೂಹದ ಶಕ್ತಿ ಪರಿಚಯಿಸುವ ವೇದಿಕೆ” ಎನ್ನುತ್ತ 2021ರ ಕೊನೆಯ ಮಾಸಿಕ ರೆಡಿಯೋ ಕಾರ್ಯಕ್ರಮ ನೀಡಿದ ಪ್ರಧಾನಿ ನರೇಂದ್ರ ಮೋದಿ, ಈ ಸಂಚಿಕೆಯಲ್ಲಿ ಹಲವು ಸ್ಫೂರ್ತಿಗಾಥೆಗಳನ್ನು, ಪ್ರೇರಕ ಉದಾಹರಣೆಗಳನ್ನು ಜನರ ಮುಂದಿಸಿರಿಸಿದರು.
1. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭಕ್ಕೆಂದು ಗ್ರೀಸ್ ದೇಶದ ಶಾಲಾ ವಿದ್ಯಾರ್ಥಿಗಳು ವಂದೇ ಮಾತರಂ ಗೀತೆ ಹಾಡಿದ್ದಾರೆ. ಇದು ಬಹಳ ಆಪ್ಯಾಯಮಾನ ಸಂಗತಿ.
2. ಪುಣೆಯ ಭಂಡಾರ್ಕರ್ ಓರಿಯೆಂಟಲ್ ರೀಸರ್ಚ್ ಇನ್ಸ್ಟಿಟ್ಯೂಟ್ ಮಹಾಭಾರತದ ಆನ್ಲೈನ್ ಕೋರ್ಸ್ ನೀಡುತ್ತಿದೆ. ಇದು ಈಗ ಉಪಲಬ್ಧವಾಗುತ್ತಿರುವ ಕೋರ್ಸ್ ಆದರೂ ಇದಕ್ಕೆ ವಿಷಯ ತಯಾರಿ ಕಳೆದ ನೂರು ವರ್ಷಗಳ ಪರಿಶ್ರಮ ಹೊಂದಿರುವಂಥದ್ದು. ಇದಕ್ಕೆ ಭಾರಿ ಸ್ಪಂದನೆಯೂ ಸಿಕ್ಕಿದೆ.
3. ಜಗತ್ತು ಭಾರತದ ಸಂಸ್ಕೃತಿ ಬಗ್ಗೆ ಕೇವಲ ಆಕರ್ಷಿತವಾಗಿಲ್ಲ, ಅದನ್ನು ಪಸರಿಸುವ ಕೆಲಸವನ್ನೂ ಮಾಡುತ್ತಿದೆ. ಸರ್ಬಿಯಾ ದೇಶದ ವಿದ್ವಾಂಸ ಡಾ. ಮೊಮಿರಿ ನಿಕಿಚ್ ಸುಮಾರು 70 ಸಾವಿರ ಸಂಸ್ಕೃತ ಪದಗಳನ್ನು ಸರ್ಬಿಯಾ ಭಾಷೆಗೆ ಅನುವಾದಿಸಿದ್ದಾರೆ.
4. ಪ್ರೊ. ಜೆ ಗಜೇಂದ್ರಮ್ ಎಂಬ ಇನ್ನೊಬ್ಬರು 93 ವರ್ಷದ ಹಿರಿಯರು ಭಾರತದ ಸುಮಾರು 40 ಪ್ರಾಚೀನ ಗ್ರಂಥಗಳನ್ನು ಮಂಗೋಲಿಯಾ ಭಾಷೆಗೆ ಅನುವಾದಿಸಿದ್ದಾರೆ.
5. ಗೋವಾದಲ್ಲಿ ಸಾಗರ್ ಮುಲೆ ಎಂಬುವವರು ಕಾವಿ ಎಂಬ ಹಳೆಯ ಚಿತ್ರಕಲೆಯನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
6. ಅರುಣಾಚಲ ಪ್ರದೇಶ ಸುಮಾರು 500 ವಿಶಿಷ್ಟ ಪಕ್ಷಿಪ್ರಬೇಧಗಳ ನಾಡು. ಇತ್ತೀಚೆಗೆ ಅಲ್ಲಿನ ಜನ ಸ್ವಯಂಪ್ರೇರಿತರಾಗಿ ತಮ್ಮಲ್ಲಿನ ಏರ್ ಗನ್ ಗಳನ್ನು ಹಿಂತಿರುಗಿಸಿದ್ದಾರೆ. ಸುಮಾರು 1,600 ಏರ್ ಗನ್ ಗಳು ಆಡಳಿತಕ್ಕೆ ಸಲ್ಲಿಕೆಯಾಗಿದ್ದು, ಪಕ್ಷಿಗಳ ಹತ್ಯೆ ತಡೆಯುವಲ್ಲಿ ಇದು ಪ್ರಮುಖ ಹೆಜ್ಜೆ.
7. ಸಾಫ್ ವಾಟರ್ ಎಂಬ ಸ್ಟಾರ್ಟ್ ಅಪ್ ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಬಳಸಿಕೊಂಡು ನಿರ್ದಿಷ್ಟ ಪ್ರಾಂತ್ಯಗಳ ಜನರಿಗೆ ನೀರಿನ ಗುಣಮಟ್ಟದ ಬಗ್ಗೆ ಮಾಹಿತಿ ಹೇಳುತ್ತಿದೆ.
8. ಡಿಜಟಲೀಕರಣದ ಮೂಲಕ ದಾಖಲೆಗಳನ್ನು ಸಂರಕ್ಷಿಸುವ ಕೆಲಸ ಆರಂಭವಾದ ಮೇಲೆ ಸರ್ಕಾರಿ ಇಲಾಖೆಗಳಲ್ಲಿ ಹಳೆ ಕಡತಗಳು ಬಿದ್ದುಕೊಂಡಿರುವುದು ಕಡಿಮೆಯಾಗಿದೆ. ಅಂಚೆ ಇಲಾಖೆಯ ಆವರಣದಲ್ಲಿ ಹೆಚ್ಚುವರಿ ಕಡತಗಳಿಂದ ಮುಕ್ತವಾಗಿರುವ ಜಾಗವೀಗ ಕೆಫೆಟೀರಿಯ ಆಗಿದೆ, ಪರಿಸರ ಸಚಿವಾಲಯದ ಕಡತಗಳನ್ನು ಸುರಿವ ಜಾಗ ವ್ಯಾಯಾಮ ಕೇಂದ್ರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ