ವೈರಸ್ ರೂಪಾಂತರ ತಡೆಗಟ್ಟಲು ಆಗುವುದಿಲ್ಲ : ಅಶ್ವಥ್ ನಾರಾಯಣ
ಮಂಗಳವಾರ, 26 ಅಕ್ಟೋಬರ್ 2021 (14:42 IST)
ಬೆಂಗಳೂರು,ಅ.26 : ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಿರುವುದರಿಂದ ಹೊಸ ರೂಪಾಂತರಿ ಎವೈ4.2 ವೈರಸ್ನಿಂದ ಹೆಚ್ಚಿನ ಆತಂಕ ಎದುರಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಿದಾಗ ಮ್ಯೂಟೇಷನ್ ಹೆಚ್ಚಾಗುತ್ತದೆ.
ರೂಪಾಂತರ ಆಗುವುದನ್ನು ತಡೆಗಟ್ಟಲು ಆಗುವುದಿಲ್ಲ. ಜನರು ರೋಗ ನಿರೋಧಕ ಲಸಿಕೆ ಪಡೆಯುವ ಮೂಲಕ ಕೊರೊನಾ ನಿಯಂತ್ರಿಸಬಹುದು. ಪ್ರಕೃತಿಯಲ್ಲಿರುವ ಕೋಟ್ಯಂತರ ವೈರಸ್ಗಳಲ್ಲಿ ಇದು ಕೂಡ ಒಂದಾಗಿದೆ ಎಂದರು. ಹೊಸ ತಳಿಯ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಹೊರಗಿನಿಂದ ಬರುವವರಿಗೆ ಈಗಾಗಲೇ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ಮತ್ತಷ್ಟು ನಿರ್ಬಂಧ ವಿಧಿಸಿದರೆ ಕಷ್ಟವಾಗಲಿದೆ. ದುಬೈ ಪ್ರವಾಸದ ವೇಳೆ ನಾನೇ ನಿರ್ಬಂಧವನ್ನು ಅನುಭವಿಸಿದ್ದೇನೆ. ಹೋಗುವಾಗಲೂ ಆರ್ಟಿಪಿಸಿಆರ್ ಟೆಸ್ಟ್, ಬರುವಾಗಲೂ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ವ್ಯಾಪಕವಾಗಿ ಸೋಂಕು ಹರಡಿರುವ ಕಡೆ ಪರೀಕ್ಷಿಸಿ ಬಿಡುವಂತಾಗಬೇಕು ಎಂದರು.
ಸಮಾಜದಲ್ಲಿ ಇಂತಹ ಕೆಲಸ ಮಾಡಬೇಕು, ಅಂತಹ ಕೆಲಸ ಮಾಡಬೇಕೆಂಬ ತಾರತಮ್ಯ ಹೋಗಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಯಾರು ಯಾವ ಕೆಲಸವನ್ನಾದರೂ ಮಾಡಬಹುದು. ತಮಗಿಷ್ಟವಾದ ಕೆಲಸ ಮಾಡಲು ಬಿಡಬೇಕು ಎಂಬುದು ವಿದ್ಯಾರ್ಥಿಯ ಭಾವನೆಯಾಗಿದೆ. ಸಮಾಜದಲ್ಲಿ ಸುಧಾರಣೆಯಾಗುತ್ತಿದ್ದು, ಇನ್ನಷ್ಟು ಸಮಯ ಬೇಕಾಗುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಂತಹ ಅವಕಾಶಗಳು ಸಿಗುತ್ತವೆ. ಯಾರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿಯಿದೆಯೋ ಆ ಕ್ಷೇತ್ರದಲ್ಲಿ ಕೆಲಸ ಮಾಡಲು ಶಾಲೆಯ ಅವಯಲ್ಲೇ ಆಯ್ಕೆ ಮಾಡಿಕೊಂಡು ಮುಂದೆ ಸಾಗುವ ಅವಕಾಶವಿದೆ. ಮುಂದಿನ ಹತ್ತು ವರ್ಷದ ಅವಧಿಯಲ್ಲಿ ಈ ರೀತಿಯ ಸುಧಾರಣೆಯನ್ನು ನಾವು ಕಾಣಬಹುದು ಎಂದು ತಿಳಿಸಿದರು.