ಇಂದು ಲಸಿಕೆ ಉತ್ಪಾದಕರ ಜೊತೆ ಮೋದಿ ಸಂವಾದ

ಶನಿವಾರ, 23 ಅಕ್ಟೋಬರ್ 2021 (15:04 IST)
ನವದೆಹಲಿ (ಅ. 23) : ದೇಶಾದ್ಯಂತ ಶತಕೋಟಿ ಕೋವಿಡ್-19 ಡೋಸ್ ಗಳನ್ನು ಹಾಕಲಾಗಿರುವ  ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊರೋನಾ ಲಸಿಕೆ ಉತ್ಪಾದಕರ ಜೊತೆ ಸಂವಾದ ನಡೆಸಲಿದ್ದಾರೆ.
ಈ ಮಾತುಕತೆ ವೇಳೆ ಕೊರೋನಾ ಲಸಿಕೆ ತಯಾರಕರ ಅನುಭವವನ್ನು ಕೇಳಲಿದ್ದಾರೆ. ಅಲ್ಲದೆ ಲಸಿಕೆ ಸಂಶೋಧನೆ ಮುಂದುವರೆಸುವ ಬಗ್ಗೆ ಕೂಡ ಚರ್ಚೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ದೇಶದಲ್ಲಿ ಶತಕೋಟಿ ಕೋವಿಡ್-19 ಡೋಸ್ ಹಾಕಿದ ಹಿನ್ನೆಲೆಯಲ್ಲಿ ನಿನ್ನೆ (ಅಕ್ಟೋಬರ್ 22ರಂದು) ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ನರೇಂದ್ರ ಮೋದಿ, ಶತಕೋಟಿ ಲಸಿಕೆ ಪ್ರಮಾಣ ಕೇವಲ ಸಂಖ್ಯೆಯಲ್ಲ, ಇದು ರಾಷ್ಟ್ರವಾಗಿ ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತದೆ. ಇದು ಪ್ರತಿಯೊಬ್ಬ ಭಾರತೀಯನ ಸಾಧನೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದರ ಯಶಸ್ಸು ದಕ್ಕುತ್ತದೆ. ಈ ಸಂದರ್ಭದಲ್ಲಿ ನಾನು ಪ್ರತಿಯೊಬ್ಬರನ್ನೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು.
ಶತಕೋಟಿ ಲಸಿಕೆ ಪೂರೈಕೆ ಕೇವಲ ಸಂಖ್ಯೆಯಷ್ಟೇ ಅಲ್ಲ, ಇದರಿಂದ ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾದಂತಾಗಿದೆ. ಭಾರತವು ಕಠಿಣ ಗುರಿಯನ್ನು ಯಶಸ್ವಿಯಾಗಿ ಸಾಧಿಸಬಹುದು ಎಂಬುದಕ್ಕೆ ಇದೊಂದು ಸಾಕ್ಷಿ. ದೇಶವು ತನ್ನ ಗುರಿಗಳ ಈಡೇರಿಕೆಗೆ ಶ್ರಮಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ