Photo Credit: ಮಂಗಳೂರು: ಧರ್ಮಸ್ಥಳ ದೇವಾಲಯಕ್ಕೆ ತೆರಳುವವರಿಗೆ ಇನ್ನು ಮುಂದೆ ದೇವರ ದರ್ಶನಕ್ಕೆ ಗಂಟೆಗಟ್ಟಲೆ ಕ್ಯೂ ನಿಂತು ಪರದಾಡಬೇಕಾಗಿಲ್ಲ. ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು ರಾಜ್ಯದಲ್ಲೇ ಮೊದಲ ಬಾರಿಗೆ ಕ್ಯೂ ಕಾಂಪ್ಲೆಕ್ಸ್ ಪದ್ಧತಿ ಜಾರಿಗೆ ತಂದಿದ್ದಾರೆ.
ತಿರುಪತಿ ದೇವಾಲಯದಲ್ಲಿರುವಂತೆ ಧರ್ಮಸ್ಥಳದಲ್ಲೂ ಇನ್ನು ಕ್ಯೂ ಕಾಂಪ್ಲೆಕ್ಸ್ ಇರಲಿದೆ. ಇಂದು ಈ ವ್ಯವಸ್ಥೆ ಲೋಕಾರ್ಪಣೆಗೊಳ್ಳಲಿದೆ. ತಿರುಪತಿ, ಶಿರಡಿ ಮೊದಲಾದ ದೇವಾಲಯಗಳಲ್ಲಿರುವಂತೆ ಆರಾಮವಾಗಿ ದೇವರ ದರ್ಶನ ಮಾಡಲು ಧರ್ಮಸ್ಥಳದಲ್ಲೂ ವ್ಯವಸ್ಥೆ ಕಲ್ಪಿಸಲಾಗಿದೆ.
ಧರ್ಮಸ್ಥಳ ದೇವಾಲಯದ ಹಿಂಭಾಗದಲ್ಲಿ 2,75,177 ಚದರ ಅಡಿಯಲ್ಲಿ ವಿಸ್ತೀರ್ಣದ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. ಇದುವರೆಗೆ ಮಕ್ಕಳು, ವಯೋವೃದ್ಧರಿಗೆ ಕಷ್ಟವಾಗುತ್ತಿತ್ತು. ಇನ್ನು ಮುಂದೆ ಭಕ್ತರು ಆರಾಮವಾಗಿ ದರ್ಶನಕ್ಕೆ ತೆರಳಬಹುದಾಗಿದೆ.
ಕ್ಯೂ ಕಾಂಪ್ಲೆಕ್ಸ್ ವಿಶೇಷತೆ ಏನು
ಈ ಕಾಂಪ್ಲೆಕ್ಸ್ ನಲ್ಲಿ ಬಹಳ ವಿಶೇಷತೆಯಿದೆ. ನಿಂತು ಸರತಿಯಲ್ಲಿ ಸಾಗುವುದರ ಬದಲು ಆಯಾಸ ಪರಿಹರಿಸಲು ಕುಳಿತು ಆರಾಮ ಮಾಡಿ ಮುಂದಿನ ಭವನಗಳಿಗೆ ತೆರಳಬಹುದಾಗಿದೆ. ಎರಡು ಅಂತಸ್ತಿನಲ್ಲಿ ತಲಾ 8 ರಂತೆ 16 ವಿಶಾಲ ಭವನಗಳಿದ್ದು ಪ್ರತಿ ಭವನದಲ್ಲಿ 800 ಮಂದಿಯಂತೆ ಸುಮಾರು 12 ಸಾವಿರ ಮಂದಿಗೆ ತಂಗಲು ಅವಕಾಶವಿದೆ. ಈ ಕಾಂಪ್ಲೆಕ್ಸ್ ನಲ್ಲಿ ತಂಗಲು ಎಲ್ಲಾ ಸೌಕರ್ಯಗಳಿವೆ. ಭವನದಲ್ಲಿ ದೇವಸ್ಥಾನದ ಇತಿಹಾಸ, ಸೇವಾ ವಿವರಗಳನ್ನು ಭಕ್ತರು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಈ ವ್ಯವಸ್ಥೆಯಿಂದ 6-7 ಗಂಟೆ ಕ್ಯೂ ನಿಲ್ಲುವುದು ತಪ್ಪುತ್ತದೆ. ಒಂದೂವರೆ ಗಂಟೆಯಲ್ಲಿ ದರ್ಶನ ಮುಗಿದು ಹೋಗುತ್ತದೆ.ಇಂತಹ ಆಧುನಿಕ ತಂತ್ರಜ್ಞಾನದ ಕ್ಯೂ ಕಾಂಪ್ಲೆಕ್ಸ್ ಬೇರೆಲ್ಲೂ ಇಲ್ಲ ಎನ್ನುವುದೇ ವಿಶೇಷ.