ಬೆಂಗಳೂರು: ಇತ್ತೀಚೆಗೆ ಚಾಮರಾಜಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಂಜುರ್ಲಿ ವೇಷ ಹಾಕಿದ್ದ ಇಬ್ಬರು ಸಚಿವ ಜಮೀರ್ ಅಹ್ಮದ್ ರನ್ನು ವೇದಿಕೆ ಕರೆತರುವ ಸನ್ನಿವೇಶವಿತ್ತು. ಇದು ದೈವಾರಾಧಕರ ಆಕ್ರೋಶಕ್ಕೆ ಗುರಿಯಾಗಿದೆ.
ತುಳುನಾಡಿನವರಿಗೆ ದೈವಗಳ ಮೇಲೆ ಅಪಾರ ಭಕ್ತಿಯಿದೆ. ಇದಕ್ಕೆ ಅಪಚಾರವಾಗುವಂತಹ ಯಾವುದೇ ಕೃತ್ಯ ಮಾಡುವುದನ್ನೂ ಅವರು ಸಹಿಸುವುದಿಲ್ಲ. ಸಿನಿಮಾಗಳಲ್ಲಿ, ವೇದಿಕೆಗಳಲ್ಲಿ ದೈವದ ವೇಷ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ದೈವದ ಪಾತ್ರ ಮಾಡುವಾಗಲೂ ಅಷ್ಟೇ ನೇಮ ನಿಷ್ಠೆ ಆಚರಿಸಿ ಪಾತ್ರ ಮಾಡಿದ್ದರು.
ಇದೀಗ ಚಾಮರಾಜಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇಬ್ಬರಿಗೆ ಪಂಜುರ್ಲಿ ದೈವದ ವೇಷ ಹಾಕಲಾಗಿದ್ದು ಅವರು ಮೊದಲು ವೇದಿಕೆ ಕೆಳಗೆ ಕೂತಿದ್ದ ಸಚಿವ ಜಮೀರ್ ಅಹ್ಮದ್ ಬಳಿ ಹೋಗಿ ಕೈ ಕುಲುಕುತ್ತಾರೆ. ಬಳಿಕ ಅವರ ಕೈ ಹಿಡಿದು ವೇದಿಕೆಗೆ ಕರೆದೊಯ್ಯುತ್ತಾರೆ. ಈ ಫೋಟೋಗಳು ವೈರಲ್ ಆಗಿದ್ದು ಸಚಿವರ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಆಕ್ರೋಶ ಕೇಳಿಬಂದಿದೆ.
ದೈವಾರಾಧನೆಗೆ ಅದರದ್ದೇ ಆದ ಗೌರವವಿದೆ. ಆದರೆ ಈ ರೀತಿ ಮನರಂಜನೆಗಾಗಿ ದೈವದ ವೇಷ ಹಾಕಿಕೊಂಡು ಸಚಿವರನ್ನು ಸ್ವಾಗತಿಸಿ ದೈವಗಳಿಗೆ ಅವಮಾನ ಮಾಡಲಾಗಿದೆ ಎಂದು ದೈವಾರಾಧಕರು ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.