ದಸರೆಗೊಂದು ಜಂಗೀ ಕುಸ್ತಿ

NRB
ಮೈಸೂರ ದಸರೆಯೆಂದರೆ ಅದೊಂದು ಬಗೆಯ ರೋಮಾಂಚನ. ಮೈನವಿರೇಳುವ ದಸರೆಯ ಹತ್ತು ದಿನದ ಹಬ್ಬದ ಸಾಲಿನ ಹಿಂದೆ ಸಾಂಪ್ರದಾಯಿಕ ಆಚರಣೆಗಳ ಹೂರಣಗಳೇ ಇವೆ. ಅಂದಿನ ಆಳರಸರ ಸಾಂಪ್ರದಾಯಿಕತೆಯ ಹಳೆಯ ದಿನಗಳು ನಿಮ್ಮೆದುರು ತೆರೆದಿಡುತ್ತವೆ. ದಸರೆಯ ಉತ್ಸವದಲ್ಲಿ ಅರಮನೆ ದರ್ಬಾರು, ಚಾಮುಂಡೀ ಪೂಜೆಯೆಷ್ಟು ಪ್ರಾಮುಖ್ಯವೋ ಅಷ್ಟೇ ಪ್ರಾಮುಖ್ಯತೆ ಹಾಗೂ ವಿಶೇಷತೆಯನ್ನು ಹೊಂದಿರುವ ದಸರಾ ಕ್ರೀಡಾ ಕೂಟ, ಆಸಕ್ತರ ಪಾಲಿನ ಸ್ವರ್ಗವೇ ಆಗಿದೆ. ಮಹಾರಾಜರ ಪರಂಪರೆ ಕಳೆಗುಂದಿದಂತೆ ಇಂದಿನ ದಿನದ ದಸರೆ ಕೇವಲ ಸಾಂಕೇತಿಕ ಸಂಭ್ರಮಕ್ಕಷ್ಟೇ ಮೀಸಲಾಗಿದೆ. ಢೀ ಢೀ ಎನ್ನುತ್ತಾ, ಪಟ್ಟುಗಳನ್ನು ಹಾಕುತ್ತಾ ಒಬ್ಬರನ್ನೊಬ್ಬರು ಮೇಲಕ್ಕೆತ್ತಿ ಬೆನ್ನು ತಾಗಿಸುವ ಗುರಿಯಲ್ಲಿ ಶಕ್ತಿ ಪ್ರದರ್ಶನ ನೀಡುವ ಆ ಮಲ್ಲಯುದ್ಧದ ಕುಸ್ತಿಯ ಕ್ಷಣಗಳನ್ನು ಕಾಣಬೇಕೆಂದರೆ ಮೈಸೂರು ದಸರೆಗೆ ಬರಬೇಕು.

ದಸರಾ ಕ್ರೀಡೆಯ ಆನಂದ ಕ್ಷಣಗಳು ಆರಂಭವಾಗುವುದೇ ಜಿಲ್ಲಾ ಮಟ್ಟದ ಕ್ರೀಢಾ ಸ್ಪರ್ಧೆಗಳಿಂದ. ಮಹಾರಾಜರ ಅಂದಿನ ದಿನಗಳಲ್ಲಿ ಯಾವ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ದೇಶ, ವಿದೇಶಗಳಿಂದ ಪೈಲ್ವಾನರು ಬರುತ್ತಿದ್ದರೋ, ಯಾವ ಗರಡಿ ಮನೆಗಳು ವಿಜೃಂಭಿಸುತ್ತಿದ್ದವೋ ಅವ್ಯಾವುವೂ ಇಂದಿಲ್ಲ. ಯುವಜನ ಕ್ರೀಡಾ ಇಲಾಖೆಯ ನೆರೆವಿಗೆ ಗರಬಡಿದಂತಿರುವ ಗರಡಿ ಮನೆಗಳಿಗೆ ಈ ದಿನಗಳಲ್ಲಿ ಕಾಯಕಲ್ಪ ಬರುತ್ತದೆ. ಇಲಾಖಾ ಆದೇಶದನುಸಾರ ಜಿಮ್ನ್ಯಾಸ್ಟಿಕ್ ಕೇಂದ್ರಗಳು, ಗರಡಿ ಮನೆಗಳು, ಬಾಡಿ ಬಿಲ್ಡಿಂಗ್ ಸಂಸ್ಥೆಗಳು ತಮ್ಮ ಪಟುಗಳನ್ನು ಸ್ಪರ್ಧೆಗಳಲ್ಲಿ ಭಾಗವಹಿಸಲು ಕಳುಹಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ದಸರೆಗಾಗಿಯೇ ರೂಪಿತವಾದ ಅರ್ಧ ಮ್ಯಾರಥಾನ್ ಕ್ರೀಡಾ ಮನೋಭಾವವನ್ನು ಸ್ಥಳೀಯರಲ್ಲಿ ಹೆಚ್ಚಿಸಲು ಅಷ್ಟೇನು ಯಶಸ್ವಿಯಾಗದಿದ್ದರೂ ಸಹ ಹಳೆಯ ಪರಂಪರೆಗಳ ಉಳಿವಿಗಾಗಿ ಒಂದು ಹೆಜ್ಜೆಯನ್ನೇ ಇಟ್ಟಿದೆ.

ಮೈಸೂರು ದಸರೆಯ ಕ್ರೀಡಾಕೂಟದಲ್ಲಿ ಮೂಲಸೌಲಭ್ಯಗಳ ಕೊರತೆ ಕಂಡರೂ ಭಾಗವಹಿಸುವವರ ಆಸಕ್ತಿಗೇನೂ ಕಡಿಮೆ ಇಲ್ಲ. ನೂತನ ದಾಖಲೆಗಳ ಬರವಿದ್ದರೂ ಸಹ ಹೊಸ ಪ್ರತಿಭೆಗಳ ಹುಡುಕಾಟಕ್ಕೊಂದು ತಳಹದಿಯಾಗಿದೆ. ದಶಕದ ಹಿಂದೆಯೇ ಚಾಮುಂಡಿ ಕ್ರೀಡಾಂಗಣವನ್ನು ನಗರದ ಕ್ರೀಡಾ ಮುಕುಟ ಮಣಿಯಾಗಿ ತಲೆ ಎತ್ತಿ ನಿಲ್ಲುವಂತೆ ಅಭಿವೃದ್ದಿ ಪಡಿಸಲಾಗಿದೆ. ಆದರೆ ಇಂದಿನ ಹೊಸ ಕ್ರೀಡೆಗಳ ಆಕರ್ಷಣೆಗಳಿಂದ ಹಳೆಯ ಕ್ರೀಡೆಗಳ ಪ್ರಾಮುಖ್ಯತೆ ದಿನಗಳೆದಂತೆ ಕುಂದುತ್ತಿರುವುದು ಶೋಚನಿಯ ಸಂಗತಿಯಾಗಿದೆ.

ಸದ್ಯಕ್ಕೆ ಮೈಸೂರು ದಸರಾ ಜಂಗೀ ಕುಸ್ತಿಗಷ್ಟೇ ಸೀಮಿತವಾಗಿದೆ. ಅದರ ವ್ಯಾಪ್ತಿ ಇಂದಿನ ದಿನಗಳಿಗನುಗುಣವಾಗಿ ಮತ್ತಷ್ಟು ಹೆಚ್ಚಬೇಕಿದೆ. ಈಜುಗೊಳದಂತಹ ಮುಂದಿನ ಯೋಜನೆಗಳು ಬರೀ ಕಾಗದದಲ್ಲೇ ಉಳಿದಿದ್ದು ಕಾರ್ಯ ರೂಪಕ್ಕೆ ಬರಬೇಕಾದ ಅವಶ್ಯಕತೆ ಹೆಚ್ಚಿದೆ. ದಸರಾ ಕ್ರೀಡಾಕೂಟವು ಗ್ರಾಮೀಣ ಪ್ರತಿಭಾನ್ವಿತರಿಗೆ ತೆರೆದ ಕನ್ನಡಿಯಾಗಬೇಕು ಎಂಬುದೇ ಕ್ರೀಡಾಸಕ್ತರ ಅಂಬೋಣ. ಸಾಂಕೇತಿಕ ನಡೆಯುವ ಕ್ರೀಡಾ ಉತ್ಸವ ಮಹತ್ತರವಾಗಿ ಹೊರಹೊಮ್ಮಬೇಕೆಂಬುದೇ ದಸರಾ ಪ್ರಿಯರ, ದಸರಾ ನೋಡುಗರ ಹೆಬ್ಬಯಕೆ.

ವೆಬ್ದುನಿಯಾವನ್ನು ಓದಿ