ಜೂಜಿನ ಹವ್ಯಾಸ ಹೊಂದಿದ್ದ ತಂದೆಯೊಬ್ಬ ನೆರೆಮನೆಯ ಯುವಕನೊಂದಿಗೆ ಜೂಜಾಡಲು ಕುಳಿತಿದ್ದ. ಹಣ, ಚಿನ್ನವನ್ನು ಕಳೆದುಕೊಂಡ ನಂತರ ಪುತ್ರಿಯನ್ನು ಕಣಕ್ಕಿಟ್ಟು ಸೋತ. ಕೂಡಲೇ ಎರಡು ಕುಟುಂಬಗಳು ವಿವಾಹಕ್ಕಾಗಿ ಸಿದ್ದತೆ ನಡೆಸತೊಡಗಿದವು. ನಂತರ ಪೊಲೀಸರ ಮಧ್ಯಪ್ರವೇಶದಿಂದ ವಿವಾಹ ರದ್ದಾದ ಘಟನೆ ನಡೆದಿದೆ.
ಬುರಿತಾಲಾ ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಜೂಜುಕೋರ ತಂದೆಯೊಬ್ಬ ಹಣವನ್ನು ಸೋತು ಕಂಗಾಲಾದ ನಂತರ ತನ್ನ 13 ವರ್ಷ ವಯಸ್ಸಿನ ಪುತ್ರಿಯನ್ನೇ ಪಣಕ್ಕಿಟ್ಟು ಸೋತು ಮಗಳನ್ನು ಎದುರಾಳಿಗೆ ಕೊಟ್ಟು ವಿವಾಹ ಮಾಡಿಕೊಡಲು ದಿನಾಂಕ ಗೊತ್ತುಪಡಿಸಿದ ಘಟನೆ ವರದಿಯಾಗಿದೆ.
ಡಿಸೆಂಬರ್ 9 ರಂದು ಪುತ್ರಿಯ ನಿಶ್ಚಿತಾರ್ಥ ನಡೆದಾಗ ಗ್ರಾಮದ ಹಿರಿಯರು ಸಂಬಂಧಿಕರು ಹಾಜರಿದ್ದರು. ಮದುವೆ ಫಿಕ್ಸ್ ಮಾಡಲಾಗಿತ್ತು. 8ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ತನಗಿಂತ ಎರಡು ಪಟ್ಟು ಹೆಚ್ಚು ವಯಸ್ಸಿನ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥವಾಗಿದ್ದರಿಂದ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಳು.
ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿರುವ ಗ್ರಾಮಕ್ಕೆ ಭೇಟಿ ನೀಡಿದ ಎನ್‌ಜಿಒ ತಂಡ, ಅಪ್ರಾಪ್ತ ಬಾಲಕಿಯ ನಿಶ್ಚಿತಾರ್ಥವಾದ ಸುದ್ದಿ ತಿಳಿದು ಕೂಡಲೇ ಮದುವೆಯನ್ನು ರದ್ದುಗೊಳಿಸುವಂತೆ ಆದೇಶಿಸಿತು.
ಜಿಲ್ಲೆಯ ಸಮಾಜ ಕಲ್ಯಾಣ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಆರೋಪಿ ತಂದೆ ಮತ್ತು ನೆರೆಮನೆಯಾತನ ಮನೆಯ ಮೇಲೆ ದಾಳಿ ಮಾಡಿ ಬಂಧಿಸುವಲ್ಲಿ ಯಶಸ್ವಿಯಾದರು.