ಅಯೋಧ್ಯೆ: ಜನವರಿ 22 ರಂದು ಪ್ರಾಣ ಪ್ರತಿಷ್ಠೆಯಾಗಿ ಲೋಕಾರ್ಪಣೆಯಾದ ಅಯೋಧ್ಯೆಯ ರಾಮಮಂದಿರದ ಮಾಳಿಗೆಯಲ್ಲಿ ನೀರು ಸೋರಿಕೆಯಾಗುತ್ತಿದೆ ಎಂದು ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿಕೆ ನೀಡಿದ್ದಾರೆ.
ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆದ ಐದು ತಿಂಗಳಾಗಿದೆಯಷ್ಟೇ. ಆಗಲೇ ರಾಮಮಂದಿರದ ಮಾಳಿಗೆಯಿಂದ ನೀರು ತೊಟ್ಟಿಕ್ಕುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಜೋರಾಗಿ ಮಳೆ ಬಂದಾಗ ನೀರು ಸೋರುತ್ತಿದೆ. ನೀರು ಹೊರಹೋಗಲು ಜಾಗವೇ ಇಲ್ಲದಾಗಿದೆ ಎಂದು ಸತ್ಯೇಂದ್ರ ದಾಸ್ ಹೇಳಿರುವುದಾಗಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಮೊದಲ ಮಳೆಗೆ ರಾಮ್ ಲಲ್ಲಾನ ಮೂರ್ತಿ ಇರುವ ಮಾಳಿಗೆಯಲ್ಲಿ ನೀರು ತೊಟ್ಟಿಕ್ಕಿತ್ತು. ಈ ಬಗ್ಗೆ ಗಮನಹರಿಸಲೇಬೇಕಿದೆ. ಏನು ಕುಂದು ಕೊರತೆಯಾಗಿದೆ ಎಂಬುದು ತಿಳಿದುಕೊಳ್ಳಬೇಕಿದೆ. ಮಾಳಿಗೆಯಲ್ಲಿ ನಿಲ್ಲುವ ನೀರು ಆರಲು ಅಥವಾ ಹೊರಹೋಗಲು ಜಾಗವೇ ಇಲ್ಲ. ಇದು ಗಂಭೀರವಾದ ವಿಷಯ ಎಂದು ಸತ್ಯೇಂದ್ರ ದಾಸ್ ಹೇಳಿದ್ದಾರೆ.
ಭಾರೀ ಮಳೆ ಬಂದರೆ ಈಗಲೇ ಮಂದಿರದೊಳಗೆ ಪ್ರಾರ್ಥನೆ ಮಾಡಲು ಕಷ್ಟವಾಗುತ್ತಿದೆ. ಇಷ್ಟೊಂದು ಯೋಜನೆ, ಇಷ್ಟೊಂದು ಇಂಜಿನಿಯರ್ ಗಳು ಪ್ಲ್ಯಾನ್ ಮಾಡಿ ಮಾಡಿರುವ ಕಟ್ಟಡದಲ್ಲಿ ಇಂತಹ ಕೊರತೆ ಕಂಡುಬಂದಿರುವುದು ಯಾಕೆ ಎಂಬುದೇ ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ.