ಅಯೋಧ್ಯೆ ಶ್ರೀರಾಮ ವಿಗ್ರಹಕ್ಕೆ ಶಿಯಾ ವಕ್ಫ್ ಬೋರ್ಡ್ ಬೆಳ್ಳಿ ಬಾಣ ಉಡುಗೊರೆ

ಬುಧವಾರ, 18 ಅಕ್ಟೋಬರ್ 2017 (13:36 IST)
ಉತ್ತರ ಪ್ರದೇಶ: ಸದ್ಯ ಉತ್ತರ ಪ್ರದೇಶ ದೇಶದ ವಿವಾದಿತ ಕೇಂದ್ರ ಬಿಂದುವಾಗಿದೆ. ಇದರ ನಡುವೆ ಅಯೋಧ್ಯೆಯಲ್ಲಿ ಅಚ್ಚರಿಯ ಸಾಮರಸ್ಯದ ಬೆಳವಣಿಗೆಯೊಂದು ನಡೆದಿದೆ. ಸರಯೂ ನದಿ ತೀರದಲ್ಲಿ ಉತ್ತರಪ್ರದೇಶ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ 100 ಮೀಟರ್‌ ಎತ್ತರದ ಶ್ರೀರಾಮನ ವಿಗ್ರಹಕ್ಕೆ ಗೌರವದ್ಯೋತಕವಾಗಿ 10 ಬೆಳ್ಳಿಯ ಬಾಣಗಳನ್ನು ಉಡುಗೊರೆ ನೀಡುವುದಾಗಿ ಶಿಯಾ ಸೆಂಟ್ರಲ್‌ ವಕ್ಫ್ ಬೋರ್ಡ್‌ ಘೋಷಿಸಿದೆ.

ಸರಯೂ ನದಿ ತೀರದಲ್ಲಿ ಶ್ರೀರಾಮ ದೇವರ ವಿಗ್ರಹ ಸ್ಥಾಪಿಸಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸಿರುವ ಶಿಯಾ ಮಂಡಳಿ, ಈ ನಿರ್ಧಾರ ಪ್ರಶ್ನಾತೀತ. ನಾವು ರಾಮನ ವಿಗ್ರಹಕ್ಕೆ ಬೆಳ್ಳಿಯ ಬಾಣಗಳನ್ನು ನೀಡುತ್ತಿದ್ದೇವೆ. ಇದು ಶಿಯಾ ಸಮುದಾಯಕ್ಕೆ ಶ್ರೀರಾಮನ ಬಗ್ಗೆ ಇರುವ ಗೌರವದ ದ್ಯೋತಕ ಎಂದಿದೆ.

ಈ ಕುರಿತು ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದಿರುವ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ, ಶ್ರೀರಾಮನ ವಿಗ್ರಹ ಸ್ಥಾಪಿಸುವುದರಿಂದ ಉತ್ತರಪ್ರದೇಶವು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ‌. ಈ ಭಾಗದ ನವಾಬರು ಯಾವಾಗಲೂ ಅಯೋಧ್ಯೆಯ ದೇವಸ್ಥಾನಗಳನ್ನು ಗೌರವಿಸುತ್ತಿದ್ದರು ಎಂದು ಹೇಳಿದ್ದಾರೆ.

ಶ್ರೀರಾಮನ ವಿಗ್ರಹ ನಿರ್ಮಾಣ ಪ್ರಸ್ತಾವವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಜಿಲಾನಿ  ಮತ್ತು ಎಐಎಂಐಎಂ  ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ವಿರೋಧಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ