ಕಾಂಗ್ರೆಸ್ ಟಿಕೆಟ್ಗಾಗಿ ಎರಡು ಬಣಗಳ ನಡುವೆ ಪೈಪೋಟಿ

ಗುರುವಾರ, 30 ಸೆಪ್ಟಂಬರ್ 2021 (11:49 IST)
ಬೆಂಗಳೂರು, ಸೆ.30 : ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯ ಪೈಕಿ ಹಾನಗಲ್ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಾಗಿದ್ದು, ಎರಡು ಬಣಗಳ ನಡುವೆ ಪೈಪೋಟಿ ಶುರುವಾಗಿದೆ.

ಸಿಂಧಗಿ ಕ್ಷೇತ್ರಕ್ಕೆ ಎಂ.ಸಿ.ಮನಗೋಳಿ ಅವರ ಪುತ್ರ ಅಶೋಕ್ ಮನಗೋಳಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಒಳವಲಯದಲ್ಲಿ ಅಸಮದಾನಗಳಿದ್ದರೂ ಪಕ್ಷದ ವರಿಷ್ಠ ನಾಯಕರ ನಿರ್ಧಾರಕ್ಕೆ ಎಲ್ಲರೂ ಸಹಿಸಿಕೊಂಡಿದ್ದಾರೆ ಎನ್ನಲಾಗಿದೆ.
ಹಾನಗಲ್ ಕ್ಷೇತ್ರದಲ್ಲಿ ಟಿಕೆಟ್ಗಾಗಿ ಇಬ್ಬರು ನಾಯಕರ ನಡುವೆ ಸ್ಪರ್ಧೆ ಏರ್ಪಟ್ಟಿದ್ದೆ. ವಿಧಾನ ಪರಿಷತ್ ಸದಸ್ಯರು ಆಗಿರುವ ಶ್ರೀನಿವಾಸ ಮಾನೆ ಕಳೆದ ಬಾರಿ ಸಿ.ಎಂ.ಉದಾಸಿ ವಿರುದ್ಧ ಸ್ಫರ್ಧೆ ಮಾಡಿ 6514 ಮತಗಳ ಕಡಿಮೆ ಅಂತರದಿಂದ ಸೋಲು ಕಂಡಿದ್ದರು. ಈ ಬಾರಿ ಅವರಿಗೆ ಟಿಕೆಟ್ ಕೊಟ್ಟರೆ ಜಯ ಸಾಧ್ಯ ಎಂಬ ಲೆಕ್ಕಾಚಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಣದಾಗಿದೆ.
ಹಾಗಾಗಿ ಶ್ರೀನಿವಾಸ ಮಾನೆಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಬಳಿ ಲಾಬಿ ನಡೆಸುತ್ತಿದ್ದಾರೆ. ಶ್ರೀನಿವಾಸ ಮಾನೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಚುನಾಯಿತರಾಗಿದ್ದರು, ಆ ಸ್ಥಾನದ ಅಧಿಕಾರಾವಧಿ ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ಅದಕ್ಕಾಗಿ ಅವರು ವಿಧಾನಸಭೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮುಂದಾಗಿದ್ದಾರೆ.
1978ರಿಂದಲೂ ಕ್ಷೇತ್ರದಲ್ಲಿ ಪ್ರಬಲ ಹಿಡಿತ ಹೊಂದಿರುವ ಮಾಜಿ ಶಾಸಕ ಮನೋಹರ ಹನುಮಂತಪ್ಪ ತಹಸೀಲ್ದಾರ್ಗೆ ಕಳೆದ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಲಾಗಿತ್ತು. ಅದಕ್ಕೂ ಮೊದಲು 1978, 1989, 1999 ಮತ್ತು 2013ರಲ್ಲಿ ಮನೋಹರ್ ತಹಸೀಲ್ದಾರ್ ಅವರು ಸಿ.ಎಂ.ಉದಾಸಿ ಅವರನ್ನು ಸೋಲಿಸಿದ್ದರು. ಅನಾದಿ ಕಾಲದಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರತಿನಿಧಿಸುತ್ತಿರುವ ಮನೋಹರ್ ತಹಸೀಲ್ದಾರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಬಣ ಪ್ರಯತ್ನಿಸುತ್ತಿದೆ.
ಈ ಮೂಲಕ ಕಾಂಗ್ರೆಸ್ ನಿಷ್ಠರಿಗೆ ನ್ಯಾಯ ದೊರಕಿಸುವ ಇರಾದೆ ಡಿ.ಕೆ.ಶಿವಕುಮಾರ್ ಬಣದ್ದಾಗಿದೆ. ಒಂದು ವೇಳೆ ಶ್ರೀನಿವಾಸ ಮಾನೆ ಅವರಿಗೆ ಟಿಕೆಟ್ ನೀಡಿದ್ದೆ ಆದರೆ ತಾವು ಕಾಂಗ್ರೆಸ್ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಮನೋಹರ್ ತಹಸೀಲ್ದಾರ್ ಬಹಿರಂಗವಾಗಿ ಹೇಳಿಕೆ ನೀಡಿಯೂ ಆಗಿದೆ. ಇಬ್ಬರ ನಡುವೆ ರಾಜಿ ಸಂಧಾನ ನಡೆಸಿ ಟಿಕೆಟ್ ತಗಾದೆಯನ್ನು ಸುಖಾಂತ್ಯಗೊಳಿಸಲು ನಿನ್ನೆ ರಾತ್ರಿ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಸಭೆ ನಡೆಸಲಾಗಿದೆ.
ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರು ಸೌಹಾರ್ದತೆಯಿಂದ ಕೆಲಸ ಮಾಡಬೇಕು, ಟಿಕೆಟ್ ವಂಚಿತರು ಮುಂದಿನ ವರ್ಷ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಭರವಸೆ ನೀಡಲಾಗಿದೆ.
ಇಂದು ಸಂಜೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಟಿಕೆಟ್ ಯಾರಿಗೆ ಎಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಬಹುತೇಕ ಶ್ರೀನಿವಾಸ ಮಾನೆಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನಿಸುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ