ಮೂರು ರಾಜ್ಯಗಳಲ್ಲಿ ಸೋತ ಬೆನ್ನಲ್ಲೇ ‘ಇಂಡಿಯಾ’ ಮೀಟಿಂಗ್ ಕರೆದ ಕಾಂಗ್ರೆಸ್
ಪಂಚ ರಾಜ್ಯ ಚುನಾವಣೆಗಳ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶ ಇಂದು ಪ್ರಕಟವಾಗಿದೆ. ಈ ಪೈಕಿ ಕಾಂಗ್ರೆಸ್ ತೆಲಂಗಾಣದಲ್ಲಿ ಮಾತ್ರ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಉಳಿದ ಮೂರೂ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ.
ಈ ಫಲಿತಾಂಶ ಮುಂಬರುವ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿತವಾಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ಒಗ್ಗಟ್ಟಾಗಿರುವ ವಿಪಕ್ಷಗಳ ಒಕ್ಕೂಟ ಇಂಡಿಯಾಗೆ ಈ ಫಲಿತಾಂಶ ಎಚ್ಚರಿಕೆಯ ಕರೆ ಗಂಟೆಯಾಗಿದೆ.
ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಡಿಸೆಂಬರ್ 6 ರಂದು ಇಂಡಿಯಾ ಒಕ್ಕೂಟದ ಪಕ್ಷಗಳನ್ನು ಸಭೆ ನಡೆಸಲು ಆಹ್ವಾನಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಿತ್ರ ಪಕ್ಷಗಳಿಗೆ ಕರೆ ಮಾಡಿ ಸಭೆ ನಡೆಸುವ ಬಗ್ಗೆ ಮಾಹಿತಿ ನೀಡಿದ್ದಾರೆ.