ಸಯಾಮಿ ಅವಳಿಗಳ ತಲೆ ಬೇರ್ಪಡಿಸಿದ ದೆಹಲಿ ಏಮ್ಸ್ ವೈದ್ಯರು

ಗುರುವಾರ, 26 ಅಕ್ಟೋಬರ್ 2017 (11:22 IST)
ನವದೆಹಲಿ: ಹುಟ್ಟುವಾಗಲೇ ಎರಡು ತಲೆಗಳು ಒಟ್ಟಿಗೆ ಜೋಡಣೆಯಾಗಿದ್ದ ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸುವಲ್ಲಿ ದೆಹಲಿ ಏಮ್ಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ಒಡಿಶಾ ಮೂಲದ ಎರಡೂವರೆ ವರ್ಷದ ಜಗನ್ನಾಥ್‌ ಹಾಗೂ ಬಲರಾಮ್‌ ಎಂಬ ಅವಳಿ ಮಕ್ಕಳು ಹುಟ್ಟುತ್ತಲೇ ದೇಹ ಬೇರೆ-ಬೇರೆಯಾಗಿದ್ದು ತಲೆಗಳು ಪರಸ್ಪರ ಅಂಟಿಕೊಂಡಿದ್ದವು. ಈ ಮಕ್ಕಳು ಒಡಿಶಾದ ಕಂಧಾಮಲ್‌ ಜಿಲ್ಲೆಯ ಕೃಷಿ ದಂಪತಿಯ ಮಕ್ಕಳಾಗಿದ್ದು, ಜುಲೈ 14ರಂದು  ಭುವನೇಶ್ವರದಿಂದ ದೆಹಲಿಗೆ ಚಿಕಿತ್ಸೆಗೆ ಕರೆ ತರಲಾಗಿತ್ತು.

ನಿನ್ನೆ(ಅ.25) ಬೆಳಗ್ಗೆ 6 ಗಂಟೆಗೆ ಇಬ್ಬರನ್ನೂ ಆಪರೇಷನ್‌ ಥಿಯೇಟರ್‌ಗೆ ಕರೆದ್ಯೊಯಲಾಯಿತು. 9 ಗಂಟೆ ಶುರುವಾದ ಬೇರ್ಪಡಿಸುವ ಶಸ್ತ್ರಚಿಕಿತ್ಸೆ ಸತತ 11 ಗಂಟೆಗಳ ಕಾಲ ನಡೆಯಿತು. ಜಗನ್ನಾಥ್‌, ಬಲರಾಮ್‌ ತಲೆಗಳನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಅವಳಿ ಮಕ್ಕಳಿಬ್ಬರ ತಲೆಗಳ ಬೇರ್ಪಡಿಸುವಿಕೆ ಶಸ್ತ್ರಚಿಕಿತ್ಸೆ ವೈದ್ಯಕೀಯ ಲೋಕದಲ್ಲೇ ಅತಿ ವಿರಾಳ. ಈ ರೀತಿ 30 ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಮಾತ್ರ ಆಗುತ್ತಿದೆ. ಇದರಲ್ಲಿ ಶೇ.50ರಷ್ಟು ಮಕ್ಕಳು ಹೆರಿಗೆ ಸಮಯದಲ್ಲಿ ಅಥವಾ ಹುಟ್ಟಿದ 24 ಗಂಟೆಯೊಳಗಡೆ ಸಾವನ್ನಪ್ಪುತ್ತವೆ. ಶೇ.25ರಷ್ಟು ಮಾತ್ರ ಶಸ್ತ್ರಚಿಕಿತ್ಸೆ ಯಶಸ್ವಿಯಾಗೋದು ಅಂತಾ ವೈದ್ಯರು ಹೇಳಿದ್ದಾರೆ.

ಏಮ್ಸ್‌ ಆಸ್ಪತ್ರೆಗೆ ಜಗನ್ನಾಥ್‌ ಮತ್ತು ಬಲರಾಮ್‌ ದಾಖಲಾದ ಬಳಿಕ ಆಗಸ್ಟ್‌ನಲ್ಲಿ ಮೊದಲ ಹಂತದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದಾದ ಬಳಿಕ ನಿನ್ನೆ ಎರಡನೇ ಹಂತ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಜಗನ್ನಾಥ್‌, ಬಲರಾಮ್‌ ಇಬ್ಬರ ಆರೋಗ್ಯ ಸ್ಥಿರವಾಗಿದೆ. ಇಂದು ಮಕ್ಕಳಿಗೆ ವೈದ್ಯರು ಪ್ಲಾಸ್ಟಿಕ್‌ ಸರ್ಜರಿ ನಡೆಸಲಿದ್ದಾರೆ. ಇದಾದ ಬಳಿಕ 72 ಗಂಟೆಗಳ ಕಾಲ ಇಬ್ಬರನ್ನೂ ನಿಗಾದಲ್ಲಿ ಇಡುವ ಸಾಧ್ಯತೆ ಇದೆ. ಜಗನ್ನಾಥ್‌ ಹಾಗೂ ಬಲರಾಮ್‌ ಬೇರ್ಪಡಿಸಲು ಒಡಿಶಾ ಸರ್ಕಾರ ಏಮ್ಸ್‌ ಆಸ್ಪತ್ರೆಗೆ 1 ಕೋಟಿ ರೂ. ಮಂಜೂರು ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ