ನವದೆಹಲಿ: ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ನವದೆಹಲಿಯ ನಿಗಮ್ ಬೋಧ್ ಘಾಟ್ ನಲ್ಲಿ ಆರಂಭವಾಗಿದೆ. ಘಟಾನುಘಟಿ ನಾಯಕರು ಅಂತಿಮ ಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ಇದಕ್ಕೆ ಮೊದಲು ಇಂದು ಎಐಸಿಸಿ ಕಚೇರಿಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ, ರಾಷ್ಟ್ರದ ಕಾಂಗ್ರೆಸ್ ನಾಯಕರು ಅಂತಿಮ ನಮನ ಸಲ್ಲಿಸಿದರು. ಅದಾದ ಬಳಿಕ ಹೂವಿನಿಂದ ಅಲಂಕೃತವಾದ ವಾಹನದಲ್ಲಿಮನಮೋಹನ್ ಸಿಂಗ್ ಅಂತಿಮ ಯಾತ್ರೆ ನಡೆಯಿತು.
ಇದಾದ ಬಳಿಕ ಅಂತಿಮ ಕ್ರಿಯೆ ನಡೆಯುವ ನಿಗಮ್ ಬೋಧ್ ಘಾಟ್ ಗೆ ಕರೆತರಲಾಯಿತು. ಇದೀಗ ಸಾಂಪ್ರದಾಯಿಕವಾಗಿ ಅಂತಿಮ ವಿಧಿ ವಿಧಾನಗಳು ನೆರವೇರುತ್ತಿದೆ. ಸಿಖ್ ಧರ್ಮದ ಸಂಪ್ರದಾಯದಂತೆ ಪ್ರಾರ್ಥನೆ ಕಾರ್ಯ ನೆರವೇರುತ್ತಿದೆ.
ಅಂತಿಮ ಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕ ಗಾಂಧಿ ಸೇರಿದಂತೆ ಅನೇಕ ನಾಯಕರು ಪಕ್ಷಬೇಧ ಮರೆತು ಭಾಗಿಯಾಗಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅವರ ಅಂತ್ಯಕ್ರಿಯೆ ಸಮಾಪ್ತಿಯಾಗಲಿದೆ.