ಚೆನ್ನೈ: ಫೆಂಗಲ್ ಚಂಡಮಾರುತ ತಮಿಳುನಾಡಿನ ಕರಾವಳಿ ಭಾಗಕ್ಕೆ ಅಪ್ಪಳಿಸಿದ್ದು, ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ನಡುವೆಯೂ ಫುಡ್ ಡೆಲಿವರಿ ಮಾಡುತ್ತಿರುವ ಡೆಲಿವರಿ ಬಾಯ್ ಗಳ ವಿಡಿಯೋ ವೈರಲ್ ಆಗಿದೆ.
ಚೆನ್ನೈನ ರಸ್ತೆಗಳೆಲ್ಲಾ ಹೆಚ್ಚು ಕಡಿಮೆ ಸ್ವಿಮ್ಮಿಂಗ್ ಪೂಲ್ ಆಗಿದೆ. ಜಲಾವೃತ ರಸ್ತೆಗಳಲ್ಲಿ ವಾಹನ ಸವಾರರು ಓಡಾಡಲು ಪರದಾಡುತ್ತಿದ್ದಾರೆ. ಆದರೆ ಕೆಲವರಿಗೆ ನಿತ್ಯ ಕಾಯಕಕ್ಕೆ ಅನಿವಾರ್ಯವಾಗಿ ನೀರಿನ ನಡುವೆಯೂ ತೆರಳಲೇಬೇಕಾದ ಅನಿವಾರ್ಯತೆ. ಅದೇ ಕತೆ ಫುಡ್ ಡೆಲಿವರಿ ಬಾಯ್ ಗಳದ್ದೂ ಆಗಿದೆ.
ನಿತ್ಯದ ಕೂಲಿ ದುಡಿಮೆ ನಂಬಿ ಬದುಕುವ ಅನೇಕರಿಗೆ ಚಂಡಮಾರುತದ ಪರಿಣಾಮ ಆಗುತ್ತಿರುವ ಮಳೆಯ ಅವಾಂತರದಿಂದ ತೊಂದರೆ ಎದುರಾಗಿದೆ. ಫುಡ್ ಡೆಲಿವರಿ ಬಾಯ್ ಒಬ್ಬ ನೀರು ತುಂಬಿದ ರಸ್ತೆಯಲ್ಲಿ ತನ್ನ ಲೊಕೇಷನ್ ಗಾಗಿ ಹುಡುಕಾಡುತ್ತಿರುವ ಫೋಟೋ ಒಂದನ್ನು ಒಬ್ಬರು ಪ್ರಕಟಿಸಿದ್ದು, ಆಹಾರ ಆನ್ ಲೈನ್ ನಲ್ಲಿ ಡೆಲಿವರಿ ಮಾಡುವ ಮೊದಲು ಇವರ ಬದುಕಿನ ಬಗ್ಗೆ ಯೋಚಿಸಿ ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬರು ಮಳೆಯಲ್ಲಿ ರಸ್ತೆಯಲ್ಲಿ ಬೈಕ್ ನಲ್ಲಿ ಕುಳಿತಿರುವ ಡೆಲಿವರಿ ಯುವಕನ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಎಲ್ಲರಿಗೂ ಜೀವನ ಸುಲಭವಲ್ಲ ಎಂದು ಬರೆದುಕೊಂಡಿದ್ದಾರೆ. ಮಳೆ, ಗಾಳಿಯಿಂದಾಗಿ ವಿಮಾನ, ರೈಲುಗಳು ರದ್ದಾಗಿವೆ. ಕಡಲ ತೀರಗಳಿಗೆ ಜನ ಹೋಗದಂತೆ ನಿರ್ಬಂಧ ಹೇರಲಾಗಿದೆ. ಫುಡ್ ಡೆಲಿವರಿ ಬಾಯ್ ವಿಡಿಯೋ ಇಲ್ಲಿದೆ ನೋಡಿ.