ಗುವಹಾಟಿ : ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಜೀಪ್ ಚಾಲನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಈಶಾ ಫೌಂಡೇಶನ್ನ ಸದ್ಗುರು ಜಗ್ಗಿ ವಾಸುದೇವ್ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸದ್ಗುರು ಜಗ್ಗಿ ವಾಸುದೇವ್ ಮತ್ತು ಹಿಮಂತ ಬಿಸ್ವಾ ಶರ್ಮಾ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಶನಿವಾರ ರಾತ್ರಿ ವಾಹನ ಚಲಾಯಿಸಿದರು ಎಂಬ ಕಾರಣಕ್ಕೆ ಅವರಿಬ್ಬರ ವಿರುದ್ಧ ಉದ್ಯಾನವನದ ಹತ್ತಿರದ ಎರಡು ಗ್ರಾಮಗಳ ಇಬ್ಬರು ನಿವಾಸಿಗಳು ದೂರು ದಾಖಲಿಸಿದ್ದಾರೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ಪ್ರವಾಸಿಗರಿಗಾಗಿ ಶನಿವಾರ ತೆರೆಯಲಾಗಿತ್ತು. ಅಂದು ರಾತ್ರಿ ಸದ್ಗುರು ಜಗ್ಗಿ ವಾಸುದೇವ್ ಉದ್ಯಾನದ ಒಳಗೆ ಜೀಪ್ ಚಾಲನೆ ಮಾಡಿದ್ದಾರೆ.
ಅವರ ಪಕ್ಕ ಸಿಎಂ ಹಿಮಂತ ಬಿಸ್ವಾ ಶರ್ಮಾ ಕುಳಿತಿದ್ದರು. ಅಸ್ಸಾಂ ಸಂಪುಟ ಸಚಿವ ಜಯಂತ ಮಲ್ಲ ಮತ್ತಿತರರು ಕೂಡಾ ಜೀಪ್ನಲ್ಲಿ ರಾತ್ರಿ ಉದ್ಯಾನದಲ್ಲಿ ಸಂಚರಿಸಿದ್ದರು.
ಇದೀಗ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಸ್ಥಳೀಯರಾದ ಸೋನೇಶ್ವರ್ ನಾರಾ ಮತ್ತು ಪ್ರವೀಣ್ ಪೆಗು ಅಸ್ಸಾಂನ ಗೋಲಘಾಟ್ ಜಿಲ್ಲೆಯ ಬೊಕಾಕಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಸಫಾರಿ ವನ್ಯಜೀವಿ ಸಂರಕ್ಷಣೆ ಕಾಯ್ದೆ, 1972ರ ಉಲ್ಲಂಘನೆಯಾಗಿದೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ.