ಜೀವರಕ್ಷಣೆಗಾಗಿ ಮೊರೆ ಇಡುತ್ತಿರುವ ಹದಿಯಾ ವಿಡಿಯೋ ಬಿಡುಗಡೆ
ಶುಕ್ರವಾರ, 27 ಅಕ್ಟೋಬರ್ 2017 (15:11 IST)
ಕೇರಳ: ನನ್ನನ್ನು ಇಲ್ಲಿಂದ ಪಾರು ಮಾಡಿ, ಇಲ್ಲದಿದ್ದರೆ ಯಾವ ಹೊತ್ತಿನಲ್ಲೂ ನನ್ನನ್ನು ಕೊಂದು ಬಿಡುತ್ತಾರೆ ಎಂದು ಅಕಿಲಾ ಅಶೋಕನ್ ಅಥವಾ ಹದಿಯಾ ಗೋಗರೆಯುತ್ತಿರುವ ಎರಡನೇ ವಿಡಿಯೋ ಬಿಡುಗಡೆ ಮಾಡಲಾಗಿದೆ.
ಲವ್ ಜಿಹಾದ್ ಆರೋಪದಲ್ಲಿ ಶಫೀನ್ ಜಹಾನ್ ಜತೆ ನಡೆದಿರುವ ಮದುವೆಯನ್ನು ಕೇರಳ ಹೈಕೋರ್ಟ್ ರದ್ದು ಮಾಡಿದ ಬಳಿಕ ಹದಿಯಾಳನ್ನು ನ್ಯಾಯಾಲಯ ಆಕೆಯ ಹೆತ್ತವರ ವಶಕ್ಕೆ ಒಪ್ಪಿಸಿದೆ.
ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಆ. 17ರಂದು ಚಿತ್ರೀಕರಿಸಿಕೊಂಡಿರುವ ಹದಿಯಾಳ ಎರಡನೇ ವಿಡಿಯೋದಲ್ಲಿ ಆಕೆ ಜೀವ ರಕ್ಷಣೆಗಾಗಿ ಗೋಗರೆಯುತ್ತಿರುವ ದೃಶ್ಯವಿದೆ. "ನೀವು ನನ್ನನ್ನು ಇಲ್ಲಿಂದ ಪಾರು ಮಾಡಲೇಬೇಕು. ಇಲ್ಲದಿದ್ದರೆ ನಾಳೆ ಅಥವಾ ನಾಡಿದ್ದರೊಳಗೆ ಯಾವುದೇ ಹೊತ್ತಿನಲ್ಲಿ ನನ್ನನ್ನು ಕೊಂದುಬಿಡಬಹುದು. ನನ್ನ ತಂದೆಗೆ ವಿಪರೀತ ಸಿಟ್ಟು ಬಂದಿದೆ ಎಂಬುದು ನನಗೆ ಗೊತ್ತಿದೆ. ನಾನು ನಡೆದಾಡಿದಾಗ ಆತ ನನ್ನನ್ನು ಹೊಡೆದು ಕಾಲಿನಿಂದ ತುಳಿಯುತ್ತಾನೆ. ನನ್ನ ತಲೆ ಅಥವಾ ದೇಹದ ಯಾವುದೇ ಭಾಗ ಎಲ್ಲಿಗಾದರೂ ಅಪ್ಪಳಿಸಿತೆಂದರೆ ನಾನು ಸಾಯುವುದು ನಿಶ್ಚಿತ’ ಎಂದು ಹದಿಯಾ ವಿಡಿಯೋದಲ್ಲಿ ಹೇಳಿದ್ದಾಳೆ.
25ರ ಹರೆಯದ ಹದಿಯಾ ಓರ್ವ ಹೊಮಿಯೋಪತಿಕ್ ವೈದ್ಯೆ; ಕಳೆದ ವರ್ಷ ಶಾಫೀನ್ ಜಹಾನ್ ಜತೆಗೆ ಮದುವೆಯಾದ ಬಳಿಕ ಆಕೆ ಇಸ್ಲಾಂ ಗೆ ಮತಾಂತರಗೊಂಡಿದ್ದಳು.