ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐಗೆ ಆಘಾತಕಾರೀ ವಿಚಾರಗಳು ಬೆಳಕಿಗೆ ಬಂದಿವೆ.
ಮೇಲ್ನೋಟಕ್ಕೆ ಸಂಜಯ್ ರಾಯ್ ಎಂಬಾತನ ಕಾಮದಾಹಕ್ಕೆ ವೈದ್ಯೆ ಬಲಿಯಾದಳು ಎಂದೆನಿಸಿದರೂ ಇದನ್ನು ಕೆದಕುತ್ತಾ ಹೋದ ಸಿಬಿಐ ಅಧಿಕಾರಿಗಳಿಗೆ ಬೇರೆಯದೇ ಅಂಶಗಳು ಬೆಳಕಿಗೆ ಬಂದಿವೆ. ಕಾಲೇಜಿನಲ್ಲಿ ನಡೆಯುತ್ತಿದ್ದ ಲಂಚ, ಅಕ್ರಮ ಔಷಧ ದಂಧೆಗೆ ವೈದ್ಯೆ ಬಲಿಯಾಗಿರಬಹುದು ಎಂದು ಸಿಬಿಐ ತನಿಖಾಧಿಕಾರಿಗಳು ಸಂಶಯಿಸಿದ್ದಾರೆ.
ಆರ್ ಜಿ ಕರ್ ಮೆಡಿಕಲ್ ಕಾಲೇಜಿಗೆ ಸರ್ಕಾರದಿಂದ ಬರುತ್ತಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಔಷಧಗಳನ್ನು ಅಕ್ರಮವಾಗಿ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿತ್ತು. ಇದರಲ್ಲಿ ಮೆಡಿಕಲ್ ಸಿಂಡಿಕೇಟ್ ಒಳಗೊಂಡಿತ್ತು. ಲಂಚ ಪಡೆದು ವೈದ್ಯಾಧಿಕಾರಿಗಳ ವರ್ಗಾವಣೆ ದಂಧೆಯೂ ನಡೆಯುತ್ತಿತ್ತು.
ಈ ಎಲ್ಲಾ ವಿಚಾರಗಳನ್ನು ತಿಳಿದ ವೈದ್ಯೆ ಪ್ರತಿಭಟಿಸಿದ್ದರಿಂದ ಆಕೆಯ ಮೇಲೆ ಇಷ್ಟು ಕ್ರೂರವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿರಬಹುದು ಎಂದು ತನಿಖಾಧಿಕಾರಿಗಳು ಸಂಶಯಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾಲೇಜಿನ ಪ್ರಾಂಶುಪಾಲ ಡಾ ಘೋಷ್ ಅವರನ್ನು ಸಿಬಿಐ ಸತತ ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿದೆ. ಮೃತ ವೈದ್ಯೆಯ ಮೃತದೇಹ ತೋರಿಸಲು ಪೋಷಕರನ್ನು ಯಾಕೆ ಕಾಯಿಸಲಾಯಿತು, ಇದನ್ನು ಮೊದಲು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದೇಕೆ, ಘಟನೆ ನಡೆದ ಬೆನ್ನಲ್ಲೇ ಸೆಮಿನಾರ್ ಹಾಲ್ ನಲ್ಲಿ ದುರಸ್ಥಿ ಕಾರ್ಯ ಮಾಡಲು ಆದೇಶಿಸಿದವರು ಯಾರು ಎಂಬಿತ್ಯಾದಿ ಪ್ರಶ್ನೆಗಳು ಕೇಳಲಾಗಿದೆ.
ವೈದ್ಯೆಯ ಸಾವಿನ ಹಿಂದೆ ದೊಡ್ಡವರ ಕೈವಾಡವಿರಬಹುದು ಎಂದು ಈ ಮೊದಲಿನಿಂದಲೂ ಶಂಕಿಸಲಾಗಿತ್ತು. ಸಂಜಯ್ ರಾಯ್ ಒಬ್ಬನೇ ಈ ಕೃತ್ಯ ನಡೆಸಲು ಸಾಧ್ಯವಿರಲಿಲ್ಲ ಎಂದು ಮೃತಳ ಪೋಷಕರೂ ಹೇಳುತ್ತಲೇ ಬಂದಿದ್ದಾರೆ. ಅಲ್ಲದೆ ಕಾಲೇಜಿನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ, ಇದರ ಬಗ್ಗೆ ಮೃತ ವೈದ್ಯೆಗೆ ಗೊತ್ತಿತ್ತು ಎಂದು ಸಹೋದ್ಯೋಗಿಗಳೂ ಅನುಮಾನ ವ್ಯಕ್ತಪಡಿಸಿದ್ದರು.