ಕೋಲ್ಕೊತ್ತಾ: ಮತದಾನ ಪ್ರಮಾಣದಲ್ಲಿ ಇದ್ದಕ್ಕಿದ್ದಂತೆ ಏರಿಕೆ ಕಂಡುಬಂದಿದ್ದರ ಹಿಂದೆ ಇವಿಎಂ ದೋಷ ಕಾರಣವಿರಬೇಕು ಎಂದು ಪಶ್ಚಿಮ ಬಂಗಾಲ ಸಿಎಂ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸಂಶಯಿಸಿದ್ದಾರೆ.
ಲೋಕಸಭೆ ಚುನಾವಣೆಯ ಎರಡು ಹಂತಗಳ ಮತದಾನ ಪ್ರಮಾಣದಲ್ಲಿ ಇದ್ದಕ್ಕಿದ್ದಂತೆ ಹೆಚ್ಚಳ ಕಂಡುಬಂದಿದೆ. ಈ ರೀತಿ ಮತದಾನ ಪ್ರಮಾಣ ಏರಿಕೆಯಾಗಿರುವುದರಿಂದ ಬಿಜೆಪಿಗೆ ಲಾಭವಾಗುತ್ತಿದೆ. ಇದರ ಹಿಂದೆ ವೋಟಿಂಗ್ ಮೆಷಿನ್ ಗಳ ತಂತ್ರಗಾರಿಕೆಯಿದೆ ಎಂದು ಮಮತಾ ಅನುಮಾನಿಸಿದ್ದಾರೆ.
ಚುನಾವಣಾ ಆಯೋಗ ಮತದಾನ ನಡೆದ ತಕ್ಷಣವೇ ಶೇಕಡಾವಾರು ಪ್ರಕಟಿಸುತ್ತಿದೆ. ಆದರೆ ನಿನ್ನೆ ನಾನು ಗಮನಿಸಿದ ಹಾಗೆ ಇದ್ದಕ್ಕಿದ್ದಂತೆ ಶೇ. 5.75 ರಷ್ಟು ಮತದಾನ ಹೆಚ್ಚಳವಾಗಿದ್ದು ಕಂಡುಬಂದಿದೆ. ಈ ರೀತಿ ಇದ್ದಕ್ಕಿದ್ದಂತೆ ಮತದಾನ ಪ್ರಮಾಣ ಹೆಚ್ಚಳವಾಗಿರುವುದು ಆತಂಕಕಾರೀ ವಿಷಯ. ಬಿಜೆಪಿಗೆ ಅನುಕೂಲವಾಗಿರದ ಸ್ಥಳಗಳಲ್ಲಿ ಮತದಾನ ಪ್ರಮಾಣ ಹೆಚ್ಚಾಗಿದೆ ಎಂದು ಮಮತಾ ಆರೋಪಿಸಿದ್ದಾರೆ.
ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು. ಬಿಜೆಪಿಗೆ ಅನುಕೂಲಕರವಾಗಿ ಈ ರೀತಿ ಮಾಡಲಾಗುತ್ತಿದೆಯೇ ಎಂದು ನಮಗೆ ಅನುಮಾನವಿದೆ. ಕೆಲವೊಂದು ವೋಟಿಂಗ್ ಮೆಷಿನ್ ಗಳು ಹಲವು ಸಮಯದಿಂದ ನಾಪತ್ತೆಯಾಗಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಗೆಲುವಿಗಾಗಿ ಬಿಜೆಪಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಹುದು ಎಂಬುದಕ್ಕೆ ಇದು ಉದಾಹರಣೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.