ನವದೆಹಲಿ: ಆಪರೇಷನ್ ಸಿಂಧೂರದ ಭಾರತ ವಿದೇಶಾಂಗ ಸಚಿವಾಲಯ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾರತದ ಮಹಿಳಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಪಾಕಿಸ್ತಾನದ ಸುಳ್ಳಿನ ಮುಖವಾಡವನ್ನು ಕಳಚಿದ್ದಾರೆ.
ಎರಡು ವಾರಗಳ ಹಿಂದೆ ಪೆಹಲ್ಗಾಮ್ ದಾಳಿಯಲ್ಲಿ 26 ಮಹಿಳೆಯರ ಸಿಂಧೂರ ಅಳಿಸಲಾಗಿತ್ತು, ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತ ಮಹಿಳಾ ಅಧಿಕಾರಿಗಳಿಂದಲೇ ದಾಳಿಯ ವಿವರ ಕೊಡಿಸಿದೆ. ಇಡೀ ದೇಶವೇ ಕೊಂಡಾಡುತ್ತಿರುವ ಈ ಇಬ್ಬರು ಮಹಿಳಾ ಅಧಿಕಾರಿಗಳ ಬಗ್ಗೆ ಇಲ್ಲಿದೆ ಮಾಹಿತಿ.
ಹೆಲಿಕಾಪ್ಟರ್ ಪೈಲಟ್ ವ್ಯೂಮಿಕಾ ಸಿಂಗ್: ಭಾರತೀಯ ವಾಯುಪಡೆಗೆ ನಿಯೋಜನೆಗೊಂಡ ವ್ಯೂಮಿಕಾ ಸಿಂಗ್ ಅವರು ಪ್ರಸ್ತುತ ಅತ್ಯುತ್ತಮ ವಿಂಗ್ ಕಮಾಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ಚೀತಾ, ಚೇತಕ್‌ನಂತಹ ಯುದ್ಧ ಹೆಲಿಕಾಪ್ಟರ್‌ಗಳನ್ನು ಹಾರಿಸುವಲ್ಲಿ ಪರಿಣತಿ ಹೊಂದಿದ್ದಾರೆ. ವಾಯುಪಡೆಗೆ ನಿಯೋಜನೆಗೊಂಡ ಆರಂಭದಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿದ್ದರು.
ಸತತ ಕಠಿಣ ಪರಿಶ್ರಮದಿಂದ 13 ವರ್ಷಗಳ ಬಳಿಕ ಅಂದ್ರೆ 2017 ಡಿ.18ರಲ್ಲಿ ಇವರಿಗೆ ವಿಂಗ್ ಕಮಾಂಡರ್ ಹುದ್ದೆ ನೀಡಲಾಯಿತು. 2021ರಲ್ಲಿ ವ್ಯೋಮಿಕಾ ಸಿಂಗ್ ಮಣಿರಾಂಗ್ ಪರ್ವತ ಏರಿದ ವಾಯುಪಡೆಯ ಮಹಿಳಾ ವಿಭಾಗದ ಭಾಗವಾಗಿದ್ದರು. ಇದು ಐತಿಹಾಸಿಕ ಸಾಧನೆಯೂ ಆಗಿತ್ತು. ವ್ಯೂಮಿಕಾ ಸಿಂಗ್ ಸಾವಿರಾರು ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ.
ಮಿಲಿಟರಿ ಕುಟುಂಬಕ್ಕೆ ಸೇರಿದ ಸೋಫಿಯಾ: ಗುಜರಾತ್‌ನ ಕರ್ನಲ್ ಸೋಫಿಯಾ ಖುರೇಷಿ ಮೂಲತಃ ಮಿಲಿಟರಿ ಕುಟುಂಬಕ್ಕೆ ಸೇರಿದವರು. ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1999 ರಲ್ಲಿ ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಪ್ರಸ್ತುತ ಭಾರತೀಯ ಸೇನೆಯ ಸಿಗ್ನಲ್ಸ್ ದಳದ ಅಧಿಕಾರಿಯಾಗಿದ್ದಾರೆ.
2016 ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿಯಾಗಿ ಇತಿಹಾಸ ನಿರ್ಮಿಸಿದ್ದರು. ಆ ಸಮಯದಲ್ಲಿ ಭಾರತ ಆಯೋಜಿಸಿದ್ದ ಅತಿದೊಡ್ಡ ವಿದೇಶಿ ಮಿಲಿಟರಿ ಕವಾಯತಿನಲ್ಲಿ ಅವರು ಭಾರತದ ತಂಡವನ್ನು ಮುನ್ನಡೆಸಿದ್ದರಲ್ಲದೇ ಪಾಲ್ಗೊಂಡಿದ್ದ 18 ರಾಷ್ಟ್ರಗಳ ಪೈಕಿ ಏಕೈಕ ಮಹಿಳಾ ಕಮಾಂಡರ್ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ.