ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ತಮ 33ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈದ್ ಮತ್ತು ರಂಜಾನ್ ಹಬ್ಬ, ಜಗನ್ನಾಥ ರಥ ಯಾತ್ರೆ, ತುರ್ತು ಪರಿಸ್ಥಿತಿ, ಯೋಗ ದಿನಾಚರಣೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.
33ನೇ ಆವೃತ್ತಿಯ ಮನ್ ಕಿ ಬಾತ್'ನಲ್ಲಿ ಮಾತನಾಡಿರುವ ಪ್ರಧಾನಿ 1975ರ ಜೂನ್ 25ರಂದು ದೇಶದಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿ ಕರಾಳ ದಿನವಾಗಿತ್ತು ಎಂದು ನೆನೆದಿದ್ದಾರೆ. ಅದು ದೇಶಭಕ್ತರು ಭಾರತೀಯರು ಮರೆಯಲಾಗದ ದಿನವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಇಡೀ ದೇಶವನ್ನು ಜೈಲಾಗಿ ಮಾರ್ಪಾಡಿಸಲಾಗಿತ್ತು. ಮಾಧ್ಯಮಗಳ ಶಕ್ತಿಯನ್ನು ಕಿತ್ತುಕೊಳ್ಳಲಾಗಿತ್ತು. ಅಂದು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡುವ ಮೂಲಕ ಪ್ರತೀಯೊಬ್ಬ ನಾಯಕರು ರಾಷ್ಟ್ರೀಯತೆಯನ್ನು ಸಾಬೀತು ಮಾಡಿದ್ದರು. ಅದು ಭಾರತೀಯರನ್ನು ಒಗ್ಗೂಡಿಸಿತು. ಪ್ರಜಾತಂತ್ರದ ಮೌಲ್ಯಗಳ ರಕ್ಷಣೆಗೆ ಕಾರಣವಾಯಿತು ಎಂದು ಹೇಳಿದ್ದಾರೆ.
ಬಿಜ್ನೋರ್ ನಲ್ಲಿ ಶೌಚಾಲಯ ನಿರ್ಮಿಸಲು ಜನ ಸರ್ಕಾರದ ಹಣ ಸ್ವೀಕರಿಸದೇ, ಸ್ವಂತ ಹಣ ಬಳಸಿದ್ದಾರೆ. ಆ ಹಣವನ್ನು ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತೆ ಸೂಚಿಸಿದ್ದಾರೆ. ಇದು ಹೃದಯಸ್ಪರ್ಶಿಯಾಗಿದೆ ಎಂದರು. ಅಲ್ಲದೇ ಸ್ವಚ್ಛ ಭಾರತಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಇದು ಕೇವಲ ಸರ್ಕಾರದ ಕೆಲಸವಲ್ಲ ಎಂದು ಕರೆ ನೀಡಿದರು.
ಯೋಗ ದಿನಾಚರಣೆ ಕುರಿತು ಮಾತನಾಡುದ ಅವರು, ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಇಡೀ ವಿಶ್ವವೇ ಎಚ್ಚೆತ್ತುಕೊಂಡಿತ್ತು. ಈ ಮೂಲಕ ಯೋಗ ಜಗತ್ತಿಗೆ ಪರಿಚಯವಾಗಿದೆ. ಯೋಗ ಸ್ವಾಸ್ಥ್ಯದ ಪ್ರತೀಕ. ಗುಜರಾತ್ ನಲ್ಲಿ 55,000 ಜನರು ಯೋಗಾಭ್ಯಾಸ ಮಾಡಿ, ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ತಿಳಿಸಿದರು.