ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮದ ಬಳಿಕ ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿದೆ. ಹಾಗಂತ ಸಿಂಧೂ ನದಿ ನೀರು ಮೊದಲಿನಂತೆ ಪಾಕಿಸ್ತಾನಕ್ಕೆ ಹರಿಯುತ್ತಾ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ಖಡಕ್ ಉತ್ತರ ಕೊಟ್ಟಿದ್ದಾರೆ. ಸಿಂಧೂ ನದಿಯ ಒಂದು ಹನಿಯೂ ಪಾಕಿಸ್ತಾನಕ್ಕೆ ಕೊಡಲ್ಲ ಎಂದಿದ್ದಾರೆ.
ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಪಾಕ್ ಪೋಷಿತ ಉಗ್ರರು ದಾಳಿ ಮಾಡಿದ ಬಳಿಕ ಸಿಟ್ಟಿಗೆದ್ದ ಭಾರತ ಮೊದಲು ರಾಜತಾಂತ್ರಿಕವಾಗಿ ಪೆಟ್ಟುಕೊಟ್ಟಿತ್ತು. ಅದರಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದು ಮಾಡಿದ್ದು ಪ್ರಮುಖವಾಗಿದೆ.
ಆಪರೇಷನ್ ಸಿಂಧೂರ್ ಬಳಿಕ ಸಂಘರ್ಷ ನಡೆದು ಈಗ ಕದನ ವಿರಾಮ ಘೋಷಣೆಯಾಗಿದೆ. ಹೀಗಾಗಿ ಸಿಂಧೂ ನದಿ ಮೊದಲಿನಂತೆ ಪಾಕಿಸ್ತಾನಕ್ಕೆ ಹರಿಸಬಹುದು ಎಂದು ಊಹಾಪೋಹಗಳು ಹರಿದಾಡುತ್ತಿದ್ದವು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ.
ಇಂದು ರಾಜಸ್ಥಾನ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ ಯಾವುದೇ ಕಾರಣಕ್ಕೂ ಒಂದು ಹನಿ ನೀರೂ ಪಾಕಿಸ್ತಾನಕ್ಕೆ ಸಿಗಲ್ಲ. ಪಾಕಿಸ್ತಾನ ಈಗಲೂ ಉಗ್ರರನ್ನು ಛೂ ಬಿಡುತ್ತಿದೆ. ಆ ದೇಶಕ್ಕೆ ಪೈಸೆ ಪೈಸೆಗೂ ಭಿಕ್ಷೆ ಬೇಡುವಂತೆ ಮಾಡುತ್ತೇವೆ. ಭಾರತಕ್ಕೆ ಸೇರಿದ ಒಂದು ಹನಿ ನೀರೂ ಪಾಕಿಸ್ತಾನಕ್ಕೆ ಸಿಗಲ್ಲ. ಭಾರತೀಯರ ರಕ್ತ ಹರಿಸಿದ್ದಕ್ಕೆ ಪಾಕಿಸ್ತಾನ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ. ನಮ್ಮ ವಿಕಸಿತ ಭಾರತದ ಬದ್ಧತೆಯನ್ನು ವಿಶ್ವದ ಯಾವುದೇ ಬದಲಾಯಿಸಲಾಗದು ಎಂದು ಮೋದಿ ಗುಡುಗಿದ್ದಾರೆ.