ನೆಹರೂ ಕಾಲದಲ್ಲಿ ನೀವು 12 ಲಕ್ಷ ದುಡಿದರೆ 2.6 ಲಕ್ಷ ತೆರಿಗೆ ಕಟ್ಟಬೇಕಾಗಿತ್ತು: ಮೋದಿ ಟಾಂಗ್

Krishnaveni K

ಭಾನುವಾರ, 2 ಫೆಬ್ರವರಿ 2025 (15:39 IST)
ನವದೆಹಲಿ: ನೆಹರೂ ಕಾಲದಲ್ಲಿ ನೀವು 12 ಲಕ್ಷ ರೂ. ದುಡಿದರೆ 2.6 ಲಕ್ಷ ರೂ. ತೆರಿಗೆ ರೂಪದಲ್ಲಿ ಕೊಡಬೇಕಾಗಿತ್ತು ಎಂದು ಪ್ರಧಾನಿ ಮೋದಿ ಈ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.

ನಿನ್ನೆಯಷ್ಟೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2025 ರನ್ನು ಮಂಡಿಸಿದ್ದರು. ಇದರಲ್ಲಿ ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ವವರೆಗೆ ಏರಿಕೆ ಮಾಡಲಾಗಿತ್ತು. ಇದರಿಂದ ಮಧ್ಯಮವರ್ಗಕ್ಕೆ ಬಂಪರ್ ಕೊಡುಗೆ ಸಿಕ್ಕಂತಾಗಿದೆ.

ಇದರ ಬಗ್ಗೆ ಇಂದು ದೆಹಲಿಯ ಚುನಾವಣಾ ಸಮಾವೇಶವೊಂದರಲ್ಲಿ ಮಾತನಾಡಿದ ಮೋದಿ ‘ಪ್ರಸಕ್ತ ಪರಿಸ್ಥಿತಿ ಬಗ್ಗೆ ನಾನು ನಿಮಗೆ ವಿವರಿಸುತ್ತೇನೆ. ಈ ಬಜೆಟ್ ಮತ್ತು ಹಿಂದಿನ ನೆಹರೂ ಕಾಲದ ಬಜೆಟ್ ನ್ನು ಹೋಲಿಸಿ ನೋಡಿ. ನೆಹರೂ ಕಾಲಘಟ್ಟದಲ್ಲಿ ನೀವು 12 ಲಕ್ಷ ರೂ. ದುಡಿದರೆ ನಿಮ್ಮ ವೇತನದ ನಾಲ್ಕನೇ ಒಂದು ಭಾಗವನ್ನು ಸರ್ಕಾರ ತೆಗೆದುಕೊಳ್ಳುತ್ತಿತ್ತು. ಇಂದಿರಾ ಗಾಂಧಿ ಕಾಲದಲ್ಲಿ ಇದು ಇನ್ನಷ್ಟು ಶಾಕ್ ಆಗುವಂತೆ ಮಾಡುತ್ತದೆ. ಆಗ 12 ಲಕ್ಷ ರೂ. ದುಡಿದರೆ 10 ಲಕ್ಷ ರೂ.ಗಳಷ್ಟು ವಿವಿಧ ಟ್ಯಾಕ್ಸ್ ಗಳ ರೂಪದಲ್ಲಿ ಸರ್ಕಾರ ಹಿಡಿದಿಟ್ಟುಕೊಳ್ಳುತ್ತಿತ್ತು. ಅದು ಹಳೆಯ ಕಾಲ. ಅದನ್ನು ಗಮನಿಸಿದರೆ ಈಗಿನ ಪರಿಸ್ಥಿತಿ ಎಷ್ಟು ಸುಧಾರಿಸಿದೆ ಎನ್ನುವುದು ನಿಮಗೆ ಅರ್ಥವಾಗುತ್ತದೆ’ ಎಂದಿದ್ದಾರೆ.

ಕೇವಲ 10-12 ವರ್ಷಗಳ ಹಿಂದೆ ಕಾಂಗ್ರಸ್ ಆಡಳಿತದ ಸಮಯದಲ್ಲಿ 12 ಲಕ್ಷ ದುಡಿದರೆ 2.6 ಲಕ್ಷ ಟ್ಯಾಕ್ಸ್ ಕೊಡಬೇಕಾಗಿತ್ತು. ಆದರೆ ಈಗ 12 ಲಕ್ಷ ದುಡಿದರೆ ನೀವು ನಯಾಪೈಸೆ ತೆರಿಗೆ ಕಟ್ಟಬೇಕಾಗಿಲ್ಲ ಎಂದು ಮೋದಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ