ನವದೆಹಲಿ: ಬಿಜೆಪಿ ನೇತೃತ್ವದ ಎನ್ ಡಿಎ ಸೋಲಿಸಬೇಕೆಂದು ವಿಪಕ್ಷಗಳು ಸ್ಥಾಪಿಸಿರುವ ಇಂಡಿಯಾ ಒಕ್ಕೂಟದ ಬಗ್ಗೆ ಪ್ರಧಾನಿ ಮೋದಿ ಮತ್ತೊಮ್ಮೆ ವ್ಯಂಗ್ಯ ಮಾಡಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಇಂಡಿಯಾ ಎಂಬ ಒಕ್ಕೂಟ ಸ್ಥಾಪಿಸಿ ಒಟ್ಟಾಗಿ ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿದೆ. ಇದರ ಬಗ್ಗೆ ಪ್ರಧಾನಿ ಮೋದಿ ಮಧ್ಯಪ್ರದೇಶದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ವ್ಯಂಗ್ಯ ಮಾಡಿದ್ದಾರೆ.
ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂದು ದೇಶದ ಜನತೆ ತಿಳಿದುಕೊಳ್ಳಬೇಕು. ನಮ್ಮ ಕಡೆಯಿಂದ ನಿಮ್ಮ ಎದುರಿಗೆ ಮೋದಿ ಎಂಬ ನಾನು 10 ವರ್ಷದ ಸಾಧನೆಯೊಂದಿಗೆ ನಿಂತಿದ್ದೇನೆ. ವಿಪಕ್ಷಗಳೂ ಪ್ರಧಾನಿ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದವು. ಆದರೆ ಸಿಗಲಿಲ್ಲ. ಇದೀಗ ಕೆಲವು ಮಾಧ್ಯಮ ವರದಿ ಪ್ರಕಾರ ಅವರು ವರ್ಷಕ್ಕೊಬ್ಬ ಪ್ರಧಾನಿ ಎಂಬಂತೆ ಐದು ವರ್ಷಕ್ಕೆ ಐವರು ಪ್ರಧಾನಿ ಅಭ್ಯರ್ಥಿಗಳನ್ನು ಕಂಡುಕೊಳ್ಳಲಿದ್ದಾರಂತೆ. ಹೀಗೇ ಆದರೆ ದೇಶದ ಗತಿ ಏನಾಗಬಹುದು? ಎಂದು ಮೋದಿ ಲೇವಡಿ ಮಾಡಿದ್ದಾರೆ.
ಅದರ ಅರ್ಥ ಅವರು ಈಗ ಪ್ರಧಾನಿ ಹುದ್ದೆಯನ್ನು ಹರಾಜಿಗಿಟ್ಟಿದ್ದಾರೆ. ಮೊದಲು ಒಬ್ಬ ಅಧಿಕಾರಕ್ಕೇರುತ್ತಾನೆ, ಉಳಿದ ನಾಲ್ವರು ತಮ್ಮ ಸರದಿಗಾಗಿ ಕಾಯುತ್ತಾರೆ. ಇದು ಹಗಲುಗನಸು ಎನಿಸುತ್ತದೆ, ಆದರೆ ಇದು ತಮಾಷೆಯ ವಿಷಯವಲ್ಲ. ಇಂತಹ ವಿಚಾರಗಳು ದೇಶವನ್ನು ಒಡೆಯಲಿದೆ. ನಿಮ್ಮ ಕನಸುಗಳನ್ನೂ ಚೂರು ಮಾಡಲಿದೆ ಎಂದು ಮೋದಿ ಟಾಂಗ್ ಕೊಟ್ಟಿದ್ದಾರೆ.