ವೇಶ್ಯಾವಾಟಿಕೆಯನ್ನು ಕಾನೂನುಬದ್ದಗೊಳಿಸಬೇಕು ಎಂದು ಹೇಳಿದವರು ಯಾರು ಗೊತ್ತಾ?
ಶನಿವಾರ, 7 ಜುಲೈ 2018 (14:15 IST)
ಹೈದರಾಬಾದ್ : ವೇಶ್ಯಾವಾಟಿಕೆಯನ್ನು ಕಾನೂನುಬದ್ದಗೊಳಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಸಲಹೆ ನೀಡಿದ್ದಾರೆ.
ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ಯೊಂದಿಗೆ ಮಾತನಾಡಿದ ಅವರು, ‘ಕೆಲವೊಂದು ದುರಾಚಾರಗಳನ್ನು ಯಾವುದೇ ಕಾನೂನಿನಿಂದ ನಿರ್ಮೂ ಲನೆ ಅಸಾಧ್ಯ. ಯಾರಾದರೂ ಇಂಥ ಅಭಿಪ್ರಾಯ ಹೊಂದಿದ್ದರೆ ಅವರು ಮೂರ್ಖರ ಸ್ವರ್ಗದಲ್ಲಿದ್ದಾರೆ ಎಂದರ್ಥ. ಈ ಹಿಂದೆ ಮದ್ಯ ನಿಷೇಧ ಮಾಡಲಾಗಿತ್ತು. ಆದರೂ ಅಕ್ರಮ ಮದ್ಯ ಉತ್ಪಾದನೆ, ಮಾರಾಟ ನಡೆದೇ ಇತ್ತು. ಸರ್ಕಾರಕ್ಕೆ ತೆರಿಗೆ ಆದಾಯ ನಷ್ಟವಾಗಿದ್ದು ಬಿಟ್ಟರೆ ಬೇರೇನೂ ಸಾಧಿಸಲಾಗಲಿಲ್ಲ. ಅದೇ ರೀತಿ ಕ್ರೀಡಾ ಬೆಟ್ಟಿಂಗ್ ಕೂಡಾ. ನಿಷೇಧ ಹೇರುವ ಮೂಲಕ ಅದನ್ನು ತಡೆಯಲಾಗದು’ ಎಂದು ಹೇಳಿದ್ದಾರೆ.
ಇದೇ ವೇಳೆ ವೇಶ್ಯಾವಾಟಿಕೆಯನ್ನೂ ಕಾನೂನುಬದ್ಧಗೊಳಿಸಬೇಕೇ ಎಂಬ ಪ್ರಶ್ನೆಗೆ 'ಹೌದು. ಇದನ್ನೂ ಕಾನೂನುಬದ್ಧಗೊಳಿಸಬೇಕು. ಈಗ ನಿಷೇಧ ಇದ್ದರೂ ಎಲ್ಲೆಡೆ ವೇಶ್ಯಾವಾಟಿಕೆ ಅವ್ಯಾಹತವಾಗಿ ನಡೆದಿದೆ. ವೇಶ್ಯಾವಾಟಿಕೆ ಇದೀಗ ಉದ್ಯಮವಾಗಿದೆ. ಯಾವುದೇ ಊರಿನಲ್ಲಿ ವೇಶ್ಯಾವಾಟಿಕೆ ಇಲ್ಲ ಎಂಬುದನ್ನು ತೋರಿಸಿ. ಹೀಗಾಗಿ ಇದನ್ನು ಕಾನೂನುಬದ್ಧಗೊಳಿಸಿ, ಅದಕ್ಕೆ ಲೈಸೆನ್ಸ್ ನೀಡಬೇಕು. ಆಗ ಮಾತ್ರ ವೇಶ್ಯಾವಾಟಿಕೆ ಮೇಲೆ ನಿಯಂತ್ರಣ ಸಾಧಿಸಬಹುದು. ನೈತಿಕತೆಯನ್ನು ಕಾನೂನಿನ ಮೂಲಕ ನಿಯಂತ್ರಿಸಲಾಗದು. ಇದನ್ನು ಧರ್ಮ ಮತ್ತು ಧಾರ್ಮಿಕ ನಾಯಕರು ಮಾತ್ರವೇ ಮಾಡಬಹುದು ಎಂದು ನ್ಯಾ. ಹೆಗ್ಡೆ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ