ಒಡಿಶಾದಲ್ಲಿ ಬಿಜೆಡಿಗೆ ಆಘಾತಕಾರಿ ಸೋಲು: ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ನಾಯಕ್‌ ರಾಜೀನಾಮೆ

sampriya

ಬುಧವಾರ, 5 ಜೂನ್ 2024 (14:44 IST)
Photo By X
ಭುವನೇಶ್ವರ: ಒಡಿಶಾ ವಿಧಾನಸಭೆಯಲ್ಲಿ ಬಿಜೆಡಿ ಪಕ್ಷವು ಆಘಾತಕಾರಿ ಸೋಲಿನೊಂದಿಗೆ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ 24 ವರ್ಷಗಳ ಸುದೀರ್ಘ ಆಡಳಿತ ಕೊನೆಗೊಂಡಿದೆ. ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ.  

ಬಿಜೆಡಿ ಮುಖ್ಯಸ್ಥರೂ ಆಗಿರುವ ನವೀನ್‌ ಪಟ್ನಾಯಕ್‌ ಇಂದು ಬೆಳಗ್ಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಘುಬರ್‌ ದಾಸ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಬಹುಮತ ಪಡೆದಿರುವ ಬಿಜೆಪಿ ಈ ಬಾರಿ ಸರ್ಕಾರ ರಚಿಸಲಿದ್ದು, ಇದುವರೆಗೆ ಮುಖ್ಯಮಂತ್ರಿ ಯಾರೆಂಬುದು ಘೋಷಣೆ ಆಗಿಲ್ಲ. ಒಡಿಶಾದಲ್ಲಿ ಈ ಬಾರಿ ಬಿಜೆಪಿ ತನ್ನ ಹಳೆದ ದೋಸ್ತಿ ಬಿಜೆಡಿಗೆ ಆಘಾತ ನೀಡಿದೆ. ಒಟ್ಟು 147 ಸ್ಥಾನಗಳಲ್ಲಿ 78 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಡಿ ಕೇವಲ 51 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 14 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ.

2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜು ಜನತಾ ದಳಕ್ಕೆ 117, ಬಿಜೆಪಿಗೆ 23 ಮತ್ತು ಕಾಂಗ್ರೆಸ್‌ಗೆ 9 ಸ್ಥಾನ ಸಿಕ್ಕಿತ್ತು. 2000ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರು ಸತತ ಐದನೇ ಅವಧಿಗೆ ಮರು ಆಯ್ಕೆಯಾಗಿದ್ದರು.

ಬಿಜೆಡಿಯ ಮಾಜಿ ಮಿತ್ರ ಪಕ್ಷವಾದ ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದೆ. ಬಿಜೆಪಿಯು 2000 ಮತ್ತು 2009ರ ನಡುವೆ ಬಿಜೆಡಿಯೊಂದಿಗೆ ಅಧಿಕಾರವನ್ನು ಹಂಚಿಕೊಂಡಿತ್ತು. 2009ರ ಚುನಾವಣೆಗೂ ಮೊದಲು ಮೈತ್ರಿ ಮುರಿದು ಬಿದ್ದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ