ಪಾಟ್ನಾ: ನವರಾತ್ರಿ ಸಂದರ್ಭದಲ್ಲಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಮೀನಿನ ಖಾದ್ಯ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ತೇಜಸ್ವಿ ಸೀಸನಲ್ ಸನಾತಿನಿ ಎಂದು ಬಿಜೆಪಿ ಟೀಕಿಸಿದೆ.
ನವರಾತ್ರಿ ಸಂದರ್ಭದಲ್ಲಿ ಮೀನಿನ ಊಟ ಮಾಡಿ ತೇಜಸ್ವಿ ತನ್ನದೇ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಟೀಕಿಸಿದ್ದಾರೆ. ತೇಜಸ್ವಿ ಯಾದವ್ ಮತ್ತು ವಿಕಾಸ್ ಶೀಲ್ ಇನ್ ಸಾನ್ ಪಾರ್ಟಿ ಮುಖ್ಯಸ್ಥ ಮುಕೇಶ್ ಸಾಹ್ನಿ ಹೆಲಿಕಾಪ್ಟರ್ ನಲ್ಲಿ ಮೀನು ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಗಿರಿರಾಜ್ ಸಿಂಗ್ ತೇಜಸ್ವಿ ಯಾದವ್ ಸೀಸನಲ್ ಸನಾತನಿ. ಅವರ ತಂದೆ ಲಾಲು ಯಾದವ್ ಅಧಿಕಾರದಲ್ಲಿದ್ದಾಗ ರೊಹಿಂಗ್ಯಾಗಳು, ಬಾಂಗ್ಲಾದೇಶೀ ಒಳನುಸುಳುಕೋರರು ಇಲ್ಲಿಗೆ ಬಂದು ಆಶ‍್ರಯ ಪಡೆದಿದ್ದರು. ಸನಾತನ ಮುಖವಾಡ ಧರಿಸಿ ರಾಜಕೀಯ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.
ಕೆಲವರು ಸನಾತನ ಧರ್ಮದ ಪುತ್ರರು ಎಂಬಂತೆ ಪೋಸ್ ಕೊಡುತ್ತಾರೆ. ಆದರೆ ಸನಾತನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಮೀನಿನ ಊಟ ಮಾಡಿದ್ದನ್ನು ನಾನು ವಿರೋಧಿಸುತ್ತಿಲ್ಲ, ಆಹಾರ ಅವರ ಆಯ್ಕೆ. ಆದರೆ ನವರಾತ್ರಿ ಸಂದರ್ಭದಲ್ಲಿ ಮೀನು ತಿನ್ನುವ ವಿಡಿಯೋ ಪ್ರಕಟಿಸುವುದು ರಾಜಕೀಯ ಗಿಮಿಕ್ ಎಂದು ಗಿರಿರಾಜ್ ಸಿಂಗ್ ಕಿಡಿ ಕಾರಿದ್ದಾರೆ.