ನೀಟ್ ಪರೀಕ್ಷೆಗೂ ಕೆಲವೇ ಗಂಟೆಗಳ ಮುನ್ನ ವೈದ್ಯಕೀಯ ಆಕಾಂಕ್ಷಿ ಆತ್ಮಹತ್ಯೆಗೆ ಶರಣು

ಭಾನುವಾರ, 12 ಸೆಪ್ಟಂಬರ್ 2021 (13:41 IST)
ಸೇಲಂ : ನೀಟ್ ಪರೀಕ್ಷೆ ಆರಂಭಕ್ಕೆ ಕೆಲವು ಗಂಟೆಗಳಿಗೆ ಮುನ್ನವೇ 19 ವರ್ಷದ ವೈದ್ಯಕೀಯ ಆಕಾಂಕ್ಷಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಎಸ್ ಧನುಷ್(19) ಎಂಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸೇಲಂನ ಮೆಟ್ಟೂರು ಸಮೀಪದ ಕೂಝೈಯೂರ್ ನಿವಾಸಿ ಧನುಷ್ ಈಗಾಗಲೇ ಎರಡು ಬಾರಿ ಪರೀಕ್ಷೆ ಬರೆದಿದ್ದರೂ, ಉತ್ತೀರ್ಣರಾಗುವಲ್ಲಿ ವಿಫಲವಾಗಿದ್ದರು. ಇದೀಗ ಮತ್ತೆ ಇಂದಿನ ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದರು. ಧನುಷ್ ಮೇಚೇರಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಮತ್ತೆ ಫೇಲ್ ಆಗಬಹುದು ಎಂಬ ಆತಂಕದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮುಂಜಾನೆ, ಧನುಷ್ ತನ್ನ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಹೋದರ ನಿಶಾಂತ್ ತಿಳಿಸಿದ್ದಾರೆ. ಕರುಮಲೈಕೂಡಲ್ ಪೊಲೀಸರು ಧನುಷ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ತನಿಖೆ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ