ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ಪುಣ್ಯ ಸ್ನಾನ ಮಾಡಬೇಕು ಎಂದು ಬಯಸುತ್ತಿದ್ದೀರಾ ಹಾಗಿದ್ದರೆ ಇದನ್ನು ಗಮನಿಸಿ.
ಮಹಾ ಕುಂಭಮೇಳಕ್ಕೆ ಕೋಟ್ಯಾಂತರ ಜನ ನಿತ್ಯವೂ ಭೇಟಿ ನೀಡುತ್ತಿದ್ದಾರೆ. ವಿಐಪಿಗಳೂ ಕುಂಭಮೇಳಕ್ಕೆ ಭೇಟಿ ನೀಡಿ ಪವಿತ್ರಸ್ನಾನ ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ ಉತ್ತರ ಪ್ರದೇಶ ಸರ್ಕಾರ ಸಾಕಷ್ಟು ತಯಾರಿ ಮಾಡಿಕೊಂಡಿದೆ.
ಗಂಗಾನದಿಯ ತಟದಲ್ಲಿ ಕುಂಭಮೇಳ ನಡೆಯುತ್ತಿದ್ದು ಇಲ್ಲಿ ಚಳಿಗಾಲವಾಗಿರುವುದರಿಂದ ವಿಪರೀತ ಚಳಿ, ಮಂಜು ಬೀಳುವ ವಾತಾವರಣವಿದೆ. ಚಳಿ ಯಾವ ಮಟ್ಟಿಗೆ ಇದೆ ಎಂದರೆ ಗಂಗಾ ನದಿಯ ಮೇಲ್ಮೈ ಮಂಜುಗಡ್ಡೆಯಾಗುವಂತಹ ಚಳಿಯಿದೆ. ಹೀಗಾಗಿ ಇಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಬಯಸುವವರು ಎಚ್ಚರಿಕೆಯಿಂದಿರುವುದು ಮುಖ್ಯ.
ವಿಶೇಷವಾಗಿ ವಯಸ್ಸಾದವರು, ಅನಾರೋಗ್ಯದಿಂದ ಬಳಲುತ್ತಿರುವವರು ಪೂರ್ಣ ಪ್ರಮಾಣದಲ್ಲಿ ತ್ರಿವೇಣಿ ಸಂಗಮದಲ್ಲಿ ಮುಳುಗಿ ಸ್ನಾನ ಮಾಡಲು ಕಷ್ಟವಾಗಬಹುದು. ಕುಂಭಮೇಳಕ್ಕೆ ಹೋಗುವಾಗ ಸ್ವೆಟರ್, ಟೋಪಿಯಂತಹ ಬೆಚ್ಚಗಿನ ಬಟ್ಟೆ ತೆಗೆದುಕೊಂಡು ಹೋಗುವುದು ಅತೀ ಮುಖ್ಯ. ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಬೇಕೆಂದರೆ ನಿಮ್ಮ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಳ್ಳಿ.