ನವದೆಹಲಿ: 2024 ರ ಕೇಂದ್ರ ಬಜೆಟ್ ಇಂದು ಸಂಸತ್ ನಲ್ಲಿ ಮಂಡನೆಯಾಗಲಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ದಾಖಲೆ ಮಾಡಲಿದ್ದಾರೆ. ಇದು ಅವರ 7 ನೇ ಬಜೆಟ್ ಆಗಿರಲಿದೆ.
ಪೂರ್ಣ ಪ್ರಮಾಣದ ವಿತ್ತ ಸಚಿವೆಯಾಗಿ ಅಧಿಕಾರ ಪೂರೈಸಿದ ಮೊದಲ ಮಹಿಳೆ ಅವರು. ಇದೀಗ ಏಳನೇ ಬಾರಿಗೆ ಬಜೆಟ್ ಮಂಡಿಸಿ ದಾಖಲೆ ಮಾಡಲಿದ್ದಾರೆ. ಸತತವಾಗಿ ಏಳು ಬಜೆಟ್ ಮಂಡಿಸಿ ನಿರ್ಮಲಾ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆ ಮುರಿಯಲಿದ್ದಾರೆ.
ಮೊರಾರ್ಜಿ ದೇಸಾಯಿ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಕಾಲಾವಧಿಯಲ್ಲಿ ಒಟ್ಟು 10 ಬಜೆಟ್ ಮಂಡಿಸಿ ಭಾರತದ ಪರ ಗರಿಷ್ಠ ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಮೊರಾರ್ಜಿ ದೇಸಾಯಿ ಸತತವಾಗಿ ಆರು ಬಜೆಟ್ ಮಂಡಿಸಿ ದಾಖಲೆ ಮಾಡಿದ್ದರು. ಆದರೆ ಈಗ ನಿರ್ಮಲಾ ಆ ದಾಖಲೆ ಮುರಿಯಲಿದ್ದಾರೆ.
ನಿರ್ಮಲಾ ಸೀತಾರಾಮನ್ ಇದೇ ವರ್ಷ ಎರಡನೇ ಬಜೆಟ್ ಮಂಡಿಸುತ್ತಿದ್ದಾರೆ. ಇತ್ತೀಚೆಗೆ 2024 ರ ಫೆಬ್ರವರಿಯಲ್ಲಿ ಮೋದಿ 2.0 ಸರ್ಕಾರದ ಮಧ್ಯಂತರ ಮತ್ತು ಕೊನೆಯ ಬಜೆಟ್ ಮಂಡಿಸಿದ್ದರು. ಇದೀಗ ಮೋದಿ 3.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದ್ದಾರೆ.